ರೈತನ ಜಮೀನಿನಲ್ಲಿ ದೇಶಪಾಂಡೆ ಒಡೆತನದ ಕಂಪೆನಿಯ ಅನಧಿಕೃತ ಟವರ್: ಪ್ರಶ್ನಿಸಿದ ರೈತನ ಬಂಧನ

ಬೆಂಗಳೂರು, ಎ. 16: ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಒಡೆತನದ ಧೃವದೇಶ್ ಮೆಟಾಲಿಕ್ಸ್ ಪ್ರೈ.ಲಿ. ಕಂಪೆನಿ ತನ್ನ ಜಮೀನಿನಲ್ಲಿ ಅನಧಿಕೃತವಾಗಿ ವಿದ್ಯುತ್ ಸಂಪರ್ಕಕ್ಕೆ ಟವರ್ ಅಳವಡಿಸಿದ್ದನ್ನು ಪ್ರಶ್ನಿಸಿದ ರೈತರನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹಿರೇಬಗನಾಳ ಗ್ರಾಮದಲ್ಲಿ ನಡೆಸಿದೆ.
ಹಿರೇಬಗನಾಳ ಗ್ರಾಮದ ನಿವಾಸಿ ಛತ್ರಪತಿ ಎಂಬ ರೈತರನ್ನು ಪೊಲೀಸರು ಬಂಧಿಸಿದ್ದು, ಸ್ಥಳೀಯ ಮುಖಂಡರು, ರೈತ ಛತ್ರಪತಿ ಬಂಧನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೂಡಲೇ ಆ ರೈತರನ್ನು ಬೇಷರತ್ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ರೈತರ ಅನುಮತಿ ಇಲ್ಲದೆ ಅನಧಿಕೃತವಾಗಿ ಜಮೀನಿನಲ್ಲಿ ಟವರ್ ಹಾಕಿರುವ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ರೈತನನ್ನೆ ಬಂಧಿಸಿರುವ ಕ್ರಮ ಸಚಿವರು ಆಡಳಿತ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ನಿದರ್ಶನ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಹಿರೇಬಗನಾಳ ಗ್ರಾಮದ ರೈತ ಛತ್ರಪತಿಗೆ ಸೇರಿರುವ ಜಮೀನಿನಲ್ಲಿ ಸಚಿವ ಆರ್.ವಿ.ದೇಶಪಾಂಡೆ ಒಡೆತನದ ಧ್ರುವದೇಶ್ ಮೆಟಾಲಿಕ್ಸ್ ಪ್ರೈ.ಲಿ.ಕಂಪೆನಿ ಅನಧಿಕೃತವಾಗಿ ವಿದ್ಯುತ್ ಟವರ್ ನಿರ್ಮಾಣ ಮಾಡಿದೆ. 220 ಕೆ.ವಿ.ಸಾಮರ್ಥ್ಯದ ವಿದ್ಯುತ್ ಪೂರೈಕೆ ಟವರ್ ಇದಾಗಿದೆ.
2011ರಲ್ಲಿಯೆ ರೈತ ಛತ್ರಪತಿಗೆ ಸೇರಿದ ಸರ್ವೆ ನಂ.166/3ರಲ್ಲಿ ಅನಧಿಕೃತವಾಗಿ ಟವರ್ ನಿರ್ಮಾಣ ಮಾಡಿದೆ. ಈ ಅನಧಿಕೃತ ಟವರ್ ತೆರವಿಗೆ ರೈತ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ, ಯಾರೊಬ್ಬರೂ ಅತ್ತ ಗಮನಹರಿಸಿಲ್ಲ. ಹೀಗಾಗಿ ಬೇಸತ್ತ ರೈತ ಟವರ್ ತೆರವಿಗೆ ಮುಂದಾಗಿದ್ದಾನೆ ಎಂದು ಹೇಳಲಾಗಿದೆ.
ಆ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿದ ಕೆಪಿಟಿಸಿಎಲ್ ಮತ್ತು ಪೊಲೀಸ್ ಸಿಬ್ಬಂದಿ ರೈತನ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೆ, ರೈತ ತನ್ನ ಜಮೀನಿನಲ್ಲಿ ಅನಧಿಕೃತವಾಗಿ ಟವರ್ ನಿರ್ಮಿಸಿದ್ದು, ಅವರನ್ನು ತೆರವುಗೊಳಿಸಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ‘ಸರಕಾರಿ ಆಸ್ತಿ ನಾಶ’ ಪ್ರಕರಣದಡಿ ಪೊಲೀಸರು ರೈತನ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.
ಕೋರ್ಟ್ ಕಟಕಟೆ: ವಿದ್ಯುತ್ ಟವರ್ ಇರುವ ಸರ್ವೆ ನಂ.166/3 ಜಮೀನು ಈ ಹಿಂದೆ ಛತ್ರಪತಿ ಅವರ ಸಹೋದರನ ವಶದಲ್ಲಿದ್ದು, ಕುಟುಂಬದ ವ್ಯಾಜ್ಯ ಕೋರ್ಟಿನಲ್ಲಿತ್ತು. ಇದೀಗ ಆ ವ್ಯಾಜ್ಯ ಇತ್ಯರ್ಥ್ಯವಾಗಿದ್ದು ಆ ಜಮೀನು ರೈತ ಛತ್ರಪತಿ ಒಡೆತನಕ್ಕೆ ಬಂದಿದೆ. ಹೀಗಾಗಿ ರೈತ ತನ್ನ ಜಮೀನಿನಲ್ಲಿರುವ ಅನಧಿಕೃತ ವಿದ್ಯುತ್ ಟವರ್ ತೆರವಿಗೆ ಹೋರಾಟ ಆರಂಭಿಸಿದ್ದಾರೆ. ದೇಶಪಾಂಡೆ ಒಡೆತನದ ಕಂಪೆನಿ ಇದಾಗಿದ್ದು, ಆಡಳಿತ ಪ್ರಭಾವ ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ರೈತನಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.







