ಎ.17-23: ಎನ್‌ಎಂಪಿಟಿಯಲ್ಲಿ ಎಸ್‌ಎಬಿ ಉಡುಪಿ ಪ್ರೀಮಿಯರ್ ಲೀಗ್ ಕ್ರಿಕೆಟ್

ಮಂಗಳೂರು, ಎ.16: ಉಡುಪಿ ಕ್ರಿಕೆಟರ್ಸ್ ಕ್ಲಬ್ ವತಿಯಿಂದ ಎಸ್‌ಎಬಿ ಉಡುಪಿ ಪ್ರೀಮಿಯರ್ ಲೀಗ್ ಎಂಬ 10 ಓವರಿನ ಅಂತಾರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಕೂಟವನ್ನು ಎಪ್ರಿಲ್ 17 ರಿಂದ 23ರವರೆಗೆ ಪಣಂಬೂರಿನ ನವಮಂಗಳೂರು ಬಂದರು ಮಂಡಳಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ಮಹಮ್ಮದ್ ಮುಬೀನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಎನ್‌ಎಂಪಿಟಿ ಕ್ರೀಡಾಂಗಣದಲ್ಲಿ ಶ್ರೀಲಂಕಾ,ಸೌದಿ ಅರೇಬಿಯಾ, ಕತಾರ್, ಓಮನ್, ಪಶ್ಚಿಮ ಬಂಗಾಳ, ದಿಲ್ಲಿ, ಚೆನ್ನೈ, ಮುಂಬೈ ಸೇರಿದಂತೆ 20ಕ್ಕೂ ಅಧಿಕ ತಂಡಗಳು ಭಾಗವಹಿಸಲಿವೆ. ಎ.17ರಂದು ಸಂಜೆ 6 ಗಂಟೆಗೆ ಉದ್ಘಾಟನಾ ಪಂದ್ಯ ನಡೆಯಲಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಆರಂಭಿಕ ಪಂದ್ಯಕ್ಕೆ ಎಸ್‌ಎಬಿ ಎಸೋಸಿಯೇಶನ್ ಕಂಪೆನಿಯ ಅಧ್ಯಕ್ಷ ಸಲಾಹುದ್ದೀನ್ ಸಲ್ಮಾನ್ ಚಾಲನೆ ನೀಡಲಿದ್ದಾರೆ. ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ , ಮಾಜಿ ಕ್ರಿಕೇಟಿಗ ಸುನಿಲ್ ಜೋಶಿ ಹಾಗೂ ಇತರ ಗಣ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಸೀಸನ್ -2ರ 10 ದಿನಗಳ ಕಾಲ ನಡೆಯುವ ಈ ಪಂದ್ಯದ ಮೂಲಕ ಗಲ್ಲಿ ಕ್ರಿಕೆಟ್ (ಪ್ರಾದೇಶಿಕವಾಗಿರುವ ಕ್ರಿಕೇಟ್ ಮಾದರಿಗೆ)ಹೆಚ್ಚಿನ ಪೋತ್ಸಾಹ ನೀಡುವ ಗುರಿ ಹೊಂದಲಾಗಿದೆ. ಪ್ರಥಮ ಪ್ರಶಸ್ತಿ ಗಳಿಸಿದ ತಂಡಕ್ಕೆ 25 ಲಕ್ಷ ರೂ., ಎರಡನೆ ಪ್ರಶಸ್ತಿ ಗಳಿಸಿದ ತಂಡಕ್ಕೆ 12 ಲಕ್ಷ ಮತ್ತು ಸೆಮಿಫೈನಲ್ ತಲುಪುವ ತಂಡಕ್ಕೆ ಮೂರು ಲಕ್ಷ, ಅತ್ಯುತ್ತಮ ಆಟಗಾರನಿಗೆ ಒಂದು ಕಾರು ಮತ್ತು ಉತ್ತಮ ಆಟಗಾರನಿಗೆ ಒಂದು ಬೈಕ್, ಅಂತಿಮ ಪಂದ್ಯದ ಪಂದ್ಯಶ್ರೇಷ್ಠ ವ್ಯಕ್ತಿಗೆ ಒಂದು ಬೈಕ್ ಸೇರಿದಂತೆ ಒಟ್ಟು 50 ಲಕ್ಷ ವೌಲ್ಯದ ಪ್ರಶಸ್ತಿ ಬಹುಮಾನವಾಗಿ ನೀಡಲಾಗುವುದು ಎಂದು ಮುಹಮ್ಮದ್ ಮಬೀನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಂದ್ಯದ ಸಂಘಟಕ ಸಾದಿಕ್ ಕಾಪು ಉಪಸ್ಥಿತರಿದ್ದರು.







