ಕೇಂದ್ರ ಸರಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ನಾಶಕ್ಕೆ ಸಂಚು: ಕಲ್ಲಾಗರ್
ಕುಂದಾಪುರ, ಎ.16: ದೇಶದ ಚುಕ್ಕಾಣಿ ಹಿಡಿದವರು ಸಂವಿಧಾನದ ಆಶಯ ಗಳನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡುವ ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ. ಯುವಜನರಿಗೆ ಉದ್ಯೋಗ ಕೊಡುವ ಬದಲು ಅವರನ್ನು ಭಾವನಾತ್ಮಕ ವಿಚಾರಗಳಿಗೆ ಬಲಿ ಬೀಳುವಂತೆ ಮಾಡಿ, ಸಂಘ ಪರಿವಾರ ತನ್ನ ರಾಜಕೀಯ ಅಸ್ತಿತ್ವವನ್ನು ಗಟ್ಟಿ ಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಡಿವೈಎಫ್‌ಐ ಮುಖಂಡ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಡಿವೈಎಫ್‌ಐ ಕುಂದಾಪುರ ಬಿ.ಸಿ.ರಸ್ತೆ ಬೆಟ್ಟಾಗರ ಘಟಕ ಸಮ್ಮೇಳನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆಳುವ ಪಕ್ಷಗಳೇ ಇಂದು ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ದಬ್ಬಾಳಿಕೆಗಳನ್ನು ನಡೆಸಿ ಜನಸಾಮಾನ್ಯ ರನ್ನು ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸದಂತೆ ಮಾಡುತ್ತಿದೆ. ವೈಜ್ಞಾನಿಕವಾಗಿ ಚಿಂತಿಸುವ ಬದಲು ಅವೈಜ್ಞಾನಿಕವಾದ ದಾರಿ ತೋರಿಸಲಾಗುತ್ತಿದೆ. ದೇಶವನ್ನು ಮೂಲಭೂತವಾದದ ಆಧಾರದ ಮೇಲೆ ಕಟ್ಟುವ ಪ್ರಯತ್ನ ಸಾಗುತ್ತಿದೆ ಎಂದು ಅವರು ಟೀಕಿಸಿದರು.
ಮುಖ್ಯ ಅತಿಥಿಯಾಗಿ ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಮಾತನಾಡಿ, ಇಂದು ಜಾತಿ ಮತಗಳ ಹೆಸರಿನಲ್ಲಿ ಕಾರ್ಯಾ ಚರಿಸುತ್ತಿರುವ ಸಂಘಟನೆಗಳು ಯುವಜನರನ್ನು ದಾರಿತಪ್ಪಿಸುತ್ತಿದೆ. ಕಳೆದ ಮೂರುವರೆ ದಶಕಗಳಿಂದ ಡಿವೈಎಫ್‌ಐ ಯುವಜನರ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತ ಬಂದಿದೆ ಎಂದು ತಿಳಿಸಿದರು.
ಘಟಕ ಕಾರ್ಯದರ್ಶಿ ರವಿ ವಿ.ಎಂ. ವಾರ್ಷಿಕ ವರದಿ ಮಂಡಿಸಿದರು. ನೂತನ ಅಧ್ಯಕ್ಷರಾಗಿ ಮಂಜುನಾಥ್, ಕಾರ್ಯದರ್ಶಿಯಾಗಿ ರವಿ ಎಂ. ಅವರನ್ನು ಒಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು.







