ಕರು ಕೊಂದಿದ್ದಕ್ಕೆ ಬಹಿಷ್ಕಾರದ ಶಿಕ್ಷೆ: ಯುವಕ ಆತ್ಮಹತ್ಯೆ

ಲಕ್ನೋ, ಎ.17: ಆಕಸ್ಮಿಕವಾಗಿ ಕರುವನ್ನು ಕೊಂದ ಆರೋಪದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ರಾಮು (18) ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಉತ್ತರ ಪ್ರದೇಶದ ಗೋರಖಪುರ ಬರಂಡಿ ಗ್ರಾಮದಲ್ಲಿ ಇರುವ ಈತನ ನಿವಾಸದಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿ ಶನಿವಾರ ಮುಂಜಾನೆ ರೈಲ್ವೆ ಹಳಿಯಲ್ಲಿ ಈತನ ದೇಹ ಪತ್ತೆಯಾಗಿದೆ. ರೈಲಿನ ಎದುರು ಹಾರಿ ರಾಮು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆತನ ಶವದ ಪಕ್ಕದಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಸಿಕ್ಕಿಲ್ಲ ಎಂದು ಇತಿಯಾಟೋಕ್ ಪೊಲೀಸ್ ಠಾಣಾಧಿಕಾರಿ ವೇದಪ್ರಕಾಶ್ ಶ್ರೀವಾಸ್ತವ ವಿವರಿಸಿದ್ದಾರೆ. ಕರುವನ್ನು ಕೊಂದದ್ದಕ್ಕಾಗಿ ಗ್ರಾಮಸ್ಥರು ಆತನಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು ತಿಳಿದ ರಾಮು, ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಇದುವರೆಗೆ ರಾಮು ಕುಟುಂಬದ ಯಾರೂ ದೂರು ದಾಖಲಿಸಲು ಮುಂದೆ ಬಂದಿಲ್ಲ. ಅವಿವಾಹಿತನಾದ ರಾಮು ತಾಯಿ ಚೆರಿಯಾದೇವಿ ಹಾಗೂ ಮೂವರು ಸಹೋದರರ ಜತೆ ವಾಸವಿದ್ದ.
"ಮೂರು ದಿನಗಳ ಹಿಂದೆ ರಾಮು ತಾನು ಸಾಕಿದ್ದ ಕರುವನ್ನು ಮೇಯಿಸಲು ಹೊಲಕ್ಕೆ ಒಯ್ಯುವ ವೇಳೆ ಸುತ್ತಿಗೆಯಿಂದ ಹೊಡೆದಿದ್ದ. ನಂತರ ಕರುವನ್ನು ಹೊಲದಲ್ಲಿ ಕಟ್ಟಿ ಹಾಕಿ ಮನೆಗೆ ಬಂದಿದ್ದ. ಬಲವಾದ ಹೊಡೆತದಿಂದ ಕರು ಮೃತಪಟ್ಟಿರುವುದು ಯುವಕನಿಗೆ ಆ ಬಳಿಕ ತಿಳಿಯಿತು" ಎಂದು ಗ್ರಾಮದ ಪ್ರಧಾನ್ ಉಷಾದೇವಿಯವರ ಪತಿ ಬಲರಾಂ ತಿವಾರಿ ವಿವರಿಸಿದ್ದಾರೆ.
ಗ್ರಾಮದಲ್ಲಿ ಸರಣಿ ಸಭೆಗಳನ್ನು ನಡೆಸಿ, ಅಂತಿಮವಾಗಿ ಆತನಿಗೆ ಸಾಮಾಜಿಕ ಬಹಿಷ್ಕಾರ ಹೇರಲು ನಿರ್ಧರಿಸಲಾಗಿದೆ. ಗ್ರಾಮದ ಸಂಪ್ರದಾಯದ ಪ್ರಕಾರ, ಕರು ಅಥವಾ ಹಸು ಕೊಂದ ವ್ಯಕ್ತಿ ಒಂದು ವರ್ಷ ಕಾಲ ಊರಿನಿಂದ ಹೊರಗೆ ಇರಬೇಕಾಗುತ್ತದೆ ಹಾಗೂ ಆತನ ಅಡುಗೆಯನ್ನೂ ಆತನೇ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿವಾರಿ ಹೇಳಿದ್ದಾರೆ.