ಪರಸ್ಪರರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವಾಗಬೇಕು: ಖಾದರ್
ತೊಕ್ಕೊಟ್ಟಿನಲ್ಲಿ ಸಾರ್ವಜನಿಕ ಕುರ್‌ಆನ್ ಪ್ರವಚನ ಸಮಾರೋಪ

ಮಂಗಳೂರು, ಎ.17: ಅತ್ಯಾಧುನಿಕ ತಂತ್ರಜ್ಞಾನವಿರುವ ಇಂದಿನ ಕಾಲಘಟ್ಟದಲ್ಲಿ ಮನುಷ್ಯರ ನಡುವೆ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿರುವುದು ದುರಂತ. ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಬರುವ ವಿಚಾರಗಳನ್ನು ಪರಾಮರ್ಶಿಸದೆ ಫಾರ್ವರ್ಡ್ ಮಾಡುವುದರಿಂದ ಇಂದು ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ
. ಈ ನಿಟ್ಟಿನಲ್ಲಿ ಪರಸ್ಪರರಲ್ಲಿ ವಿಶ್ವಾಸ ಮೂಡಿಸಬೇಕಾದ ಕಾರ್ಯವಾಗಬೇಕಾಗಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು. ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಅಂಬೇಡ್ಕರ್ ಮೈದಾನದಲ್ಲಿ ಹಮ್ಮಿಕೊಂಡ ಸಾರ್ವಜನಿಕ ಕುರ್‌ಆನ್ ಪ್ರವಚನದ ಸಮಾರೋಪ ಸಮಾರಂಭದಲ್ಲಿ ರವಿವಾರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
‘ಮಾನವ ಜೀವನದ ವಾಸ್ತವಿಕತೆ’ ಎಂಬ ವಿಷಯದಲ್ಲಿ ತೊಕ್ಕೊಟ್ಟು ಮಸ್ಜಿದುಲ್ ಹುದಾದ ಖತೀಬ್ ಮುಹಮ್ಮದ್ ಕುಂಞಿ ಪ್ರವಚನ ನೀಡಿದರು.
ತೊಕ್ಕೊಟ್ಟು ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ರೆ.ಫಾ. ಡಾ.ಜಾನ್ ಬ್ಯಾಪ್ಟಿಸ್ಟ್ ಸಲ್ದಾನ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ತೊಕ್ಕೊಟ್ಟು ನಾಗಕನ್ನಿಕಾ ರಕ್ತೇಶ್ವರಿ ಕ್ಷೇತ್ರದ ಅಧ್ಯಕ್ಷ ಚಂದ್ರಕಾಂತ್, ಸದ್ಭಾವನಾ ವೇದಿಕೆಯ ಉಳ್ಳಾಲದ ಕೋಶಾಧಿಕಾರಿ ಮೆಲ್ವಿನ್ ಡಿಸೋಜ, ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷ ಎ.ಎಚ್.ಮಹ್ಮೂದ್ ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಕಾರ್ಯದರ್ಶಿ ಅಬ್ದುಲ್ ಕರೀಂ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಮುಹ್ಮುದ್ ಮುಬೀನ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಝಮ್ಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿದರು.





