ಭಾರೀ ಗಂಡಾಂತರಕ್ಕೆ ಸಿಲುಕಿದ ಟಿಟಿವಿ ದಿನಕರನ್

ಹೊಸದಿಲ್ಲಿ, ಎ.17: ಎಐಎಡಿಎಂಕೆಯ ಅಧಿನಾಯಕಿ ಶಶಿಕಲಾ ಅವರ ಸಂಬಂಧಿ ಮತ್ತು ಪಕ್ಷದ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಎಐಎಡಿಎಂಕೆಯ ಚಿನ್ಹೆ (ಎರಡು ಎಲೆಗಳು) ಉಳಿಸಿಕೊಳ್ಳುವುದಕ್ಕಾಗಿ ಭಾರತದ ಚುನಾವಣಾ ಆಯೋಗಕ್ಕೆ ಪ್ರಭಾವ ಬೀರಲು ಲಂಚ ನೀಡಲು ಪ್ರಯತ್ನಿಸಿದ ಆರೋಪದಲ್ಲಿ ಭಾರೀ ಗಂಡಾಂತರಕ್ಕೆ ಸಿಲುಕಿಕೊಂಡಿದ್ದಾರೆ. ಅವರ ವಿರುದ್ಧ ದಿಲ್ಲಿಯ ಕ್ರೈಮ್ ಬ್ರಾಂಚ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ರವಿವಾರ ರಾತ್ರಿ ಹ್ಯಾಟ್ ಹೋಟೆಲ್ ನಲ್ಲಿ ಈ ಸಂಬಂಧ ಮಧ್ಯವರ್ತಿಯ ಪಾತ್ರ ವಹಿಸಿದ್ದ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ದಿನಕರನ್ ಚುನಾವಣಾ ಆಯೋಗಕ್ಕೆ ಪ್ರಭಾವ ಬೀರಲು ಐವತ್ತು ಕೋಟಿ ರೂ. ಲಂಚ ನೀಡುವ ಜವಾಬ್ದಾರಿ ಈತನಿಗೆ ವಹಿಸಿಕೊಟ್ಟಿರುವ ವಿಚಾರ ಬಹಿರಂಗಗೊಂಡಿತ್ತು,
ಚಂದ್ರಶೇಖರ್ ಬಂಧನದ ವೇಳೆ ಆತನ ಬಳಿ 1.3 ಕೋಟಿ ರೂ. ಪತ್ತೆಯಾಗಿತ್ತು. ಆತ ನೀಡಿದ ಮಾಹಿತಿಯಂತೆ ಪೊಲೀಸರು ಟಿಟಿವಿ ದಿನಕರನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ದಿನಕರನ್ ಅವರನ್ನು ಪ್ರಶ್ನಿಸಲು ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡಲಾಗುವುದು ಎಂದು ದಿಲ್ಲಿ ಪೊಲೀಸ್ ಇಲಾಖೆಯ ಪ್ರಧಾನ ವಕ್ತಾರ ದಿಪೇಂದ್ರ ಪಾಠಕ್ ತಿಳಿಸಿದ್ದಾರೆ.
ಎಐಎಡಿಎಂಕೆಯ ಎರಡು ಎಲೆಗಳ ಚಿನ್ನೆಗಾಗಿ ಶಶಿಕಲಾ ಬಣ ಮತ್ತು ಮಾಜಿ ಮುಖ್ಯ ಮಂತ್ರಿ ಓ.ಪನ್ನೀರ್ ಸೆಲ್ವಂ ಬಣ ಹೋರಾಟದ ಹಾದಿ ಹಿಡಿದಾಗ ಚುನಾವಣಾ ಆಯೋಗವು ಈ ಚಿನ್ಹೆಯನ್ನು ತಡೆ ಹಿಡಿದಿತ್ತು.
ತನ್ನ ವಿರುದ್ಧ ಎಫ್ಐಆರ್ ದಾಖಲಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಟಿಟಿವಿ ದಿನಕರನ್ ಅವರು" ಸುಕೇಶ್ ಚಂದ್ರಶೇಖರ್ ಪರಿಚಯ ನನಗಿಲ್ಲ. ಆತನೊಂದಿಗೆ ನಾನು ಎಂದಿಗೂ ಮಾತನಾಡಿಲ್ಲ. ಪೊಲೀಸರ ವಿಚಾರಣೆಗೆ ಸಹಕಾರ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.