ಟರ್ಕಿ ಜನಮತ ಸಂಗ್ರಹ : ವಿಜಯ ತಮ್ಮದು ಎಂದು ಘೋಷಿಸಿಕೊಂಡ ಅಧ್ಯಕ್ಷ ಎರ್ದೊಗನ್

ಅಂಕಾರ, ಎ.17: ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗನ್ ಅವರಿಗೆ ಸಂಪೂರ್ಣ ಅಧಿಕಾರವನ್ನು ನೀಡುವ ಸಲುವಾಗಿ ರವಿವಾರ ನಡೆಸಲಾದ ಜನಮತ ಸಂಗ್ರಹದಲ್ಲಿ ತಮಗೆ ಸಂಪೂರ್ಣ ಜಯ ದೊರೆತಿದೆ ಎಂದು ಎರ್ದೊಗನ್ ಹಾಗೂ ದೇಶದ ಪ್ರಧಾನಿ ಬಿನಾಲಿ ಯಿಲ್ಡಿರಿಂ ಹೇಳಿಕೊಂಡಿದ್ದಾರೆ.
ಆದರೆ ಟರ್ಕಿಯ ಚುನಾವಣಾ ಆಯೋಗ ಅಧಿಕೃತ ಫಲಿತಾಂಶವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ದೇಶದ ಅಧಿಕೃತ ಸುದ್ದಿ ಸಂಸ್ಥೆ ಅನದೊಲು ಏಜನ್ಸಿಯ ಪ್ರಕಾರ ಶೇ.99.8 ಮತಪತ್ರಗಳ ಎಣಿಕೆ ಮುಗಿದಿದ್ದು, ಶೇ.51.4 ಮತದಾರರು ಎರ್ದೊಗನ್ ಪರ ಮತ ಚಲಾಯಿಸಿದ್ದಾರೆಂದು ಹೇಳಿಕೊಂಡಿದೆ.
ಜನಮತ ಸಂಗ್ರಹದಲ್ಲಿ ಒಟ್ಟು 47.5 ಮಿಲಿಯನ್ ಮತದಾರರು ಮತ ಚಲಾಯಿಸಿದ್ದರು. ಸುಪ್ರೀಂ ಇಲೆಕ್ಟೋರಲ್ ಕೌನ್ಸಿಲ್ ಅಧ್ಯಕ್ಷ ಸದಿ ಗುವೆನ್ ಕೂಡ ಅನಧಿಕೃತ ಫಲಿತಾಂಶಗಳ ಪ್ರಕಾರ ‘ಪರ’ ಮತಗಳು ಹೆಚ್ಚಾಗಿವೆ ಎಂದು ದೃಢಪಡಿಸಿದ್ದಾರೆ. ಆಕ್ಷೇಪಗಳೇನಾದರೂ ಇದ್ದರೆ ಅವುಗಳನ್ನು ಪರಿಗಣಿಸಿ ಅಧಿಕೃತ ಫಲಿತಾಂಶಗಳು 10 ದಿನಗಳಲ್ಲಿ ಹೊರಬೀಳಬಹುದು ಎಂದು ಅವರು ಹೇಳಿದ್ದಾರೆ.
ಈಗಿನ ಸಂಸದೀಯ ಪ್ರಜಾಪ್ರಭುತ್ವದ ಬದಲು ಪ್ರಬಲ ಅಧ್ಯಕ್ಷೀಯ ಆಡಳಿತಕ್ಕೆ ಅನುವು ಮಾಡಿ ಕೊಡುವ ಸಲುವಾಗಿ ಆಡಳಿತ ಜಸ್ಟಿಸ್ ಆ್ಯಂಡ್ ಡೆವಲಪ್ಮೆಂಟ್ ಪಾರ್ಟಿ ಮುಂದಿರಿಸಿದ 18 ಪರಿಚ್ಛೇದಗಳಿರುವ ಸುಧಾರಣಾ ಪ್ಯಾಕೇಜನ್ನು ಬೆಂಬಲಿಸುವಂತೆ ಈ ಜನಮತ ಸಂಗ್ರಹ ನಡೆದಿತ್ತು.
ಎರ್ದೊಗಾನ್ ಅವರಿಗೆ ಜನಮತ ಸಂಗ್ರಹದಲ್ಲಿ ಜಯ ದೊರೆತಿದೆ ಎಂದು ಪ್ರಧಾನಿ ಬಿನಾಲಿ ಯಿಲ್ಡಿರಿಂ ಘೋಷಿಸುವ ಮೊದಲೇ ಅಂಕಾರದಲ್ಲಿ ಸಾವಿರಾರು ಜನರು ಸೇರಿ ನೃತ್ಯ ಮಾಡಿ ಘೋಷಣೆಗಳನ್ನು ಕೂಗಿ ತಮ್ಮ ಸಂತಸ ವ್ಯಕ್ತಪಡಿಸಿದರು. ಹೊಸ ಯೋಜನೆ ಜಾರಿಗೊಂಡಲ್ಲಿ ವಿದೇಶಿ ಶಕ್ತಿಗಳನ್ನು ದೂರವಿರಿಸುವ ನಿಟ್ಟಿನಲ್ಲಿ ದೇಶಕ್ಕೆ ಹೆಚ್ಚಿನ ಬಲ ಬಂದಂತಾಗುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆಯಲ್ಲಿ ಸ್ಟಾಂಪ್ ಇಲ್ಲದ ಮತಪತ್ರಗಳನ್ನೂ ಸ್ವೀಕರಿಸಲು ಕೊನೆಯ ಕ್ಷಣದಲ್ಲಿ ನಿರ್ಧರಿಸಿದ್ದ ಚುನಾವಣಾ ಆಯೋಗದ ಕ್ರಮಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕನಿಷ್ಠ ಶೇ.37ರಷ್ಟು ಮತಗಳನ್ನು ಮತ್ತೆ ಎಣಿಕೆ ಮಾಡಬೇಕೆಂದು ಆಗ್ರಹಿಸಿವೆ.







