ತ್ರಿವಳಿ ತಲಾಖ್ ವಿವಾದವನ್ನು ಮುಸ್ಲಿಮರೇ ಬಗೆಹರಿಸಿಕೊಳ್ಳಲಿ: ಕಾಂಗ್ರೆಸ್

ಜೋಧಪುರ್, ಎ.17: ತ್ರಿವಳಿ ತಲಾಖ್ ವಿಚಾರವನ್ನು ಮುಸ್ಲಿಮರು ತಾವಾಗಿಯೇ ಪರಿಹರಿಸಲಿ ಎಂದು ಹೇಳಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಈ ವಿವಾದವನ್ನು ಕೋರ್ಟಿಗೆಳೆಯುವುದು ಬೇಡ ಎಂದು ಬಿಜೆಪಿಗೆ ಸಲಹೆ ನೀಡಿದ್ದಾರೆ.
‘‘ಈ ವಿಚಾರದಲ್ಲಿ ಹೆಚ್ಚಿನ ಹಸ್ತಕ್ಷೇಪವನ್ನು ಯಾರೂ ಮಾಡಬಾರದು. ಬಿಜೆಪಿ ಮಾತ್ರ ವ್ಯತಿರಿಕ್ತ ಸನ್ನಿವೇಶ ಸೃಷ್ಟಿಸಿ ಉದ್ರಿಕ್ತ ವಾತಾವರಣ ನಿರ್ಮಿಸಲು ಯತ್ನಿಸುತ್ತಿದೆ’’ ಎಂದು ದಿಗ್ವಿಜಯ್ ಆರೋಪಿಸಿದ್ದಾರೆ.
ತ್ರಿವಳಿ ತಲಾಖ್ ಗೆ ಸಂಬಂಧಿಸಿದ ಅಪೀಲುಗಳ ಬಗ್ಗೆ ಸುಪ್ರೀಂ ಕೋರ್ಟ್ ಮೇ 11ರಿಂದ ವಿಚಾರಣೆ ಆರಂಭಿಸಲಿದೆ.
ತರುವಾಯ ಮುಸ್ಲಿಂ ಮಹಿಳೆಯರಿಗೆ ಗೌರವ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಸರಿಯಾಗಿಯೇ ಇದೆ ಎಂದು ಸೋಮವಾರ ಬಿಜೆಪಿ ಹೇಳಿದೆ.
‘‘ನಮ್ಮ ಮುಸ್ಲಿಂ ಸಹೋದರಿಯರು ನ್ಯಾಯಕ್ಕೆ ಅರ್ಹರು. ಈ ವಿಚಾರವನ್ನು ಜಿಲ್ಲಾ ಮಟ್ಟದಲ್ಲಿಯೇ ಪರಿಹರಿಸಬೇಕು. ಹೊಸ ಭಾರತದತ್ತ ನಾವು ಸಾಗಬೇಕು. ನಾವು ನಿಧಾನವಾಗಿ ಚಲಿಸಿದರೆ ಸಾಕಾಗದು, ಸಂಪೂರ್ಣ ವೇಗದಲ್ಲಿ ಮುನ್ನಡೆಯಬೇಕು’’ ಎಂದು ರವಿವಾರ ಮೋದಿ ಹೇಳಿದ್ದರು.
ಒಡಿಶಾದ ಭುವನೇಶ್ವರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿದ ಮೋದಿ, ಪಕ್ಷವು ಹಿಂದುಳಿದ ಮುಸ್ಲಿಮರ ಬಗ್ಗೆ ಸಮ್ಮೇಳನಗಳನ್ನು ನಡೆಸಬೇಕೆಂಬ ಸಲಹೆ ನೀಡಿದ್ದರು.