ಕಾಶ್ಮೀರದಲ್ಲಿ ನಿಲ್ಲದ ಹಿಂಸಾಚಾರ: ಭದ್ರತಾ ಪಡೆಗಳೊಂದಿಗೆ ವಿದ್ಯಾರ್ಥಿಗಳ ಘರ್ಷಣೆ

ಶ್ರೀನಗರ.ಎ.17: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿನ ಕಾಲೇಜೊಂದರಲ್ಲಿ ಭದ್ರತಾ ಪಡೆಗಳ ದೌರ್ಜನ್ಯವನ್ನು ವಿರೋಧಿಸಿ ಸೋಮವಾರ ಕಾಶ್ಮೀರ ಕಣಿವೆಯ ವಿವಿಧೆಡೆಗಳಲ್ಲಿ ಪ್ರತಿಭಟನೆಗಳ ಸಂದರ್ಭ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆಗಳು ನಡೆದವು. ವಿದ್ಯಾರ್ಥಿಗಳು ತರಗತಿಗಳನ್ನೂ ಬಹಿಷ್ಕರಿಸಿದ್ದರು.
ಕಣಿವೆಯಾದ್ಯಂತದ ಪದವಿ ಕಾಲೇಜುಗಳು ಮತ್ತು ಕೆಲವು ವಿವಿಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ರ್ಯಾಲಿಗಳನ್ನು ನಡೆಸಲು ಪ್ರಯತ್ನಿಸಿದ್ದರು. ಅವರನ್ನು ಪೊಲೀಸರು ತಡೆದಾಗ ಘರ್ಷಣೆಗಳು ಭುಗಿಲ್ಲೆದ್ದವು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ಘರ್ಷಣೆಗಳಿಂದಾಗಿ ಶ್ರೀನಗರದ ಹೃದಯಭಾಗ ಲಾಲ್ ಚೌಕ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಾಮಾನ್ಯ ಜನಜೀವನಕ್ಕೆ ವ್ಯತ್ಯಯವುಂಟಾಗಿತ್ತು.
ಶನಿವಾರ ಪುಲ್ವಾಮಾದ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ಭದ್ರತಾ ಪಡೆಗಳ ‘ಕ್ರೌರ್ಯ ’ದ ವಿರುದ್ಧ ಪ್ರತಿಭಟನೆಗೆ ವಿವಿಧ ವಿದ್ಯಾರ್ಥಿ ಗುಂಪುಗಳು ಕರೆ ನೀಡಿದ್ದವು. ಭದ್ರತಾ ಪಡೆಗಳ ದೌರ್ಜನ್ಯದಿಂದ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದರು.
ಲಾಲ್ ಚೌಕ್ ಸಮೀಪದ ಶ್ರೀ ಪ್ರತಾಪ್ ಕಾಲೇಜಿನ ಸಮೀಪ ವಿದ್ಯಾರ್ಥಿಗಳು ರ್ಯಾಲಿಯನ್ನು ಹಮ್ಮಿಕೊಂಡಾಗ ಭದ್ರತಾಪಡೆಗಳು ತಡೆಯಲು ಮುಂದಾಗಿದ್ದವು. ಇದು ಅವರ ಮತ್ತು ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ನಾಂದಿ ಹಾಡಿತ್ತು. ಕಲ್ಲು ತೂರಾಟದಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರದ ಜೊತೆಗೆ ಅಶ್ರುವಾಯು ಶೆಲ್‌ಗಳನ್ನೂ ಸಿಡಿಸಿದ್ದರು.
ಇದು ಪರಿಸರದಲ್ಲಿ ಭೀತಿಯನ್ನು ಸೃಷ್ಟಿಸಿದ್ದು, ಅಂಗಡಿ-ಮುಂಗಟ್ಟುಗಳು ಬಾಗಿಲೆಳೆದು ಕೊಂಡಿದ್ದವು. ವಾಹನಗಳ ಸಂಚಾರಕ್ಕೂ ವ್ಯತ್ಯಯವುಂಟಾಗಿತ್ತು.
ಇದರ ಬೆನ್ನಲ್ಲೇ ಸಮೀಪದ ಮಹಿಳಾ ಕಾಲೇಜು ಹಾಗು ನಗರದಲ್ಲಿಯ ಮತ್ತು ಕಣಿವೆಯ ಎಲ್ಲೆಡೆಗಳಲ್ಲಿಯ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದರು.
ಘರ್ಷಣೆಗಳಲ್ಲಿ ಭದ್ರತಾ ಪಡೆಗಳು ಸೇರಿದಂತೆ ಹಲವಾರು ಜನರು ಗಾಯ ಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.







