ಸೆಕ್ಸ್ ಹಗರಣದ ನಂತರ ಆಪ್ ನಿಂದ ವಜಾಗೊಂಡಿದ್ದ ಮಾಜಿ ಸಚಿವನಿಂದ ಈಗ ದೆಹಲಿಯಲ್ಲಿ ಬಿಜೆಪಿ ಪರ ಪ್ರಚಾರ

ನವದೆಹಲಿ, ಎ. 17 : ಸೆಕ್ಸ್ ಹಗರಣದಲ್ಲಿ ಸಿಲುಕಿದ ನಂತರ ಎಎಪಿಯಿಂದ ವಜಾಗೊಂಡಿದ್ದ ಮಾಜಿ ಸಚಿವ ಸಂದೀಪ್ ಕುಮಾರ್ ಇದೀಗ ಎಪ್ರಿಲ್ 23ರಂದು ನಡೆಯಲಿರುವ ಎಂಸಿಡಿ ಚುನಾವಣೆಗಾಗಿ ಬಿಜೆಪಿ ಪರ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಕೇಜ್ರಿವಾಲ್ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಸಂದೀಫ್ ನರೇಲಾದ ಬಿಜೆಪಿ ಅಭ್ಯರ್ಥಿ ಸವಿತಾ ಖತ್ರಿ ಪರ ಪ್ರಚಾರ ನಡೆಸುತ್ತಿದ್ದಾರೆಂದು ವರದಿಯೊಂದು ತಿಳಿಸಿದೆ.
ಗೋವಾ ಚುನಾವಣೆಯ ಸಂದರ್ಭ ಸಂದೀಪ್ ಕುಮಾರ್ ಫೋಟೋಗಳುಳ್ಳ ಪೋಸ್ಟರುಗಳನ್ನು ಬಿಜೆಪಿ ಹಾಕಿತ್ತು ಎಂದು ಎಎಪಿ ಆರೋಪಿಸಿತ್ತು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ಸುದ್ದಿಯಾದಾಗ ಬಿಜೆಪಿ ಕುಮಾರ್ ಅವರಿಂದ ಆದಷ್ಟು ದೂರ ಸರಿಯಲು ಯತ್ನಿಸಿತ್ತು. ಪಕ್ಷದ ವಕ್ತಾರರೊಬ್ಬರ ಪ್ರಕಾರ ಕುಮಾರ್ ಅವರು ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ್ದರೂ ಅವರನ್ನು ಅಲ್ಲಿಂದ ತೆರಳುವಂತೆ ಹೇಳಲಾಗಿತ್ತು. ತರುವಾಯ ಕೇಜ್ರಿವಾಲ್ ತಮ್ಮ ಪೊರಕೆಯ ಮುಖಾಂತರ ದೇಶದ ಜನರನ್ನು ಮೂರ್ಖರಾಗಿಸಲು ಹೊರಟಿದ್ದಾರೆ ಎಂದೂ ಕುಮಾರ್ ಆರೋಪಿಸಿದ್ದಾರೆ.
ಸಂದೀಪ್ ಕುಮಾರ್ ಅವರು ಇಬ್ಬರು ಮಹಿಳೆಯರೊಂದಿಗಿರುವ ಅಶ್ಲೀಲ ಸೀಡಿಯೊಂದು ಕಳೆದ ವರ್ಷ ಹೊರಬಿದ್ದ ನಂತರ ಅವರನ್ನು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸಂಪುಟದಿಂದ ಕಿತ್ತು ಹಾಕಿದ್ದರಲ್ಲದೆ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿತ್ತು. ಸೀಡಿಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯರಲ್ಲೊಬ್ಬಳು ಸಂದೀಪ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಬಂಧನ ಭೀತಿಯಿಂದ ಕುಮಾರ್ ನಂತರ ಪೊಲೀಸರಿಗೆ ಶರಣಾಗಿದ್ದರು.
ಇದೀಗ ಸಂದೀಪ್ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆಂದು ತಿಳಿಯುತ್ತಲೇ ಟ್ವಿಟ್ಟರಿಗರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಸಂದೀಪ್ ವಿರುದ್ಧ ಹಿಂದೆ ಹೇಳಿದ್ದೆಲ್ಲವೂ ಬಿಜೆಪಿಗೆ ಮರೆತು ಹೋಗಿದೆಯೇ ಎಂದು ಪ್ರಶ್ನಿಸಲಾರಂಭಿಸಿದ್ದಾರೆ.







