ಸರಕಾರದ ದಿವ್ಯ ನಿರ್ಲಕ್ಷ: ಪುತ್ರನ ಸ್ಮಾರಕವನ್ನು ತಾನೇ ಸ್ವಚ್ಛಗೊಳಿಸಿದ ಹುತಾತ್ಮ ಯೋಧನ ತಂದೆ

ಕ್ಯಾಪ್ಶನ್: ಪುತ್ರನ ಸ್ಮಾರಕ ಸ್ವಚ್ಛಗೊಳಿಸುತ್ತಿರುವ ಜಿ.ಎಲ್.ಬಾತ್ರಾ
ಧರ್ಮಶಾಲಾ (ಹಿ.ಪ್ರ)ಎ.17: ತನ್ನ ‘ಏ ದಿಲ್ ಮಾಂಗೇ ಮೋರ್ ’ ಘೋಷಣೆಯಿಂದ ಪ್ರಸಿದ್ಧರಾಗಿದ್ದ ಕಾರ್ಗಿಲ್ ಯುದ್ಧ ಹೀರೊ ಕ್ಯಾಪ್ಟನ ವಿಕ್ರಮ್ ಬಾತ್ರಾ ಅವರ ಸ್ಮಾರಕದ ಬಗ್ಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ ಮೊನ್ನೆ ಹುತಾತ್ಮ ಯೋಧನ ತಂದೆ, 70ರ ಹರೆಯದ ಜಿ.ಎಲ್.ಬಾತ್ರಾ ಅವರೇ ಪುತ್ರನ ಸ್ಮಾರಕವನ್ನು ತನ್ನ ಕೈಯಾರೆ ಸ್ವಚ್ಛಗೊಳಿಸುವುದರೊಂದಿಗೆ ಜಗಜ್ಜಾಹೀರಾಗಿದೆ. ಇಷ್ಟಾದ ಬಳಿಕವೇ ಅಧಿಕಾರಿಗಳು ಸ್ಮಾರಕದ ಸ್ವಚ್ಛತಾ ಕಾರ್ಯಕ್ಕಾಗಿ ಧಾವಿಸಿದ್ದರು.
ಪಾಲಂಪುರ ನಗರಸಭೆಯ ಎದುರು ಸ್ಥಾಪಿಸಲಾಗಿರುವ ತನ್ನ ಮಗನ ಸ್ಮಾರಕದ ದುಃಸ್ಥಿತಿಯನ್ನು ಕಂಡು ಮರುಗಿದ ಜಿ.ಎಲ್ ಬಾತ್ರಾ ಸುತ್ತಲಿನ ಸ್ಥಳವನ್ನೆಲ್ಲ ಸ್ವಚ್ಛಗೊಳಿಸಿದರು. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಾಜ್ಯಸರಕಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಹುತಾತ್ಮರು ಮತ್ತು ಇತರ ರಾಷ್ಟ್ರೀಯ ನಾಯಕರನ್ನು ಅವರ ಜಯಂತಿ ಅಥವಾ ಪುಣ್ಯತಿಥಿಯ ದಿನಗಳಂದು ಮಾತ್ರ ಸ್ಮರಿಸಲಾಗುತ್ತದೆ. ಅವರಿಗಾಗಿ ಅಧಿಕಾರಿಗಳು ಗೌರವಪೂರ್ಣ ವಾತಾವರಣವನ್ನು ಸೃಷ್ಟಿಸಬೇಕು ಮತ್ತು ಯುವಜನರಿಗಾಗಿ ಉದಾಹರಣೆಯಾಗಿಸಬೇಕು. ಇಂತಹ ಸ್ಮಾರಕಗಳ ಸೂಕ್ತ ನಿರ್ವಹಣೆಯಿರಬೇಕು. ಇದಕ್ಕಾಗಿ ಸಮಿತಿಗಳನ್ನು ರಚಿಸಬೇಕು ಅಥವಾ ಯಾರನ್ನಾದರೂ ಕರ್ತವ್ಯಕ್ಕೆ ನಿಯೋಜಿಸ ಬೇಕು ಎಂದು ಜಿ.ಎಲ್.ಬಾತ್ರಾ ಹೇಳಿದರು.
ಸ್ಮಾರಕದ ದುಃಸ್ಥಿತಿಗೆ ಕೆಟ್ಟ ಹವಾಮಾನ ಕಾರಣವೆಂದು ಉಪ ವಿಭಾಗಾಧಿಕಾರಿ ಅಜಿತ್ ಭಾರದ್ವಾಜ್ ಅವರು ತನ್ನನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸಮಜಾಯಿಷಿ ನೀಡಿದ್ದಾರೆ.







