ಬರ ಪೀಡಿತ ತಾಲೂಕುಗಳ ‘ಶಾಲಾ ಮಕ್ಕಳಿಗೆ’ ಮೇ 27ರವರೆಗೆ 'ಬಿಸಿಯೂಟ'

ಬೆಂಗಳೂರು, ಎ. 17: ಮೂವತ್ತು ಜಿಲ್ಲೆಗಳ 160 ಬರ ಪೀಡಿತ ತಾಲೂಕುಗಳಲ್ಲಿ ಸರಕಾರಿ ಹಾಗೂ ಅನುದಾನಿತ 33,251 ಶಾಲೆಗಳ ಒಟ್ಟು 20.27ಲಕ್ಷ ವಿದ್ಯಾರ್ಥಿಗಳಿಗೆ ಮೇ 27ರವರೆಗೆ ಕಡ್ಡಾಯವಾಗಿ ಮಧ್ಯಾಹ್ನದ ಬಿಸಿಯೂಟ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
1ರಿಂದ 8ನೆ ತರಗತಿಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆಯಡಿ ಮೇ 27ರ ವರೆಗೆ ರವಿವಾರ ಮತ್ತು ಸರಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ಬಿಸಿಯೂಟ ನೀಡಬೇಕು. ಬಿಸಿಯೂಟ ಅನುಷ್ಠಾನಕ್ಕೆ ಪ್ರತಿ ಶಾಲೆಗೆ ಒಬ್ಬ ಶಿಕ್ಷಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಲಾಗಿದೆ.
ಬೇಸಿಗೆ ಸಂಭ್ರಮ: ಬರ ಪೀಡಿತ ತಾಲೂಕುಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ 150ಕ್ಕಿಂತ ಹೆಚ್ಚಿರುವ 7,049 ಶಾಲೆಗಳಲ್ಲಿ ಬೇಸಿಗೆ ಶಿಬಿರದ ಮೂಲಕ ಪೂರಕ ಕಲಿಕೆ ಸಂಬಂಧ ಪ್ರಥಮ್ ಸಂಸ್ಥೆ ಸಹಯೋಗದಲ್ಲಿ ‘ಬೇಸಿಗೆ ಸಂಭ್ರಮ’ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. 5 ಮತ್ತು 6ನೆ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಬೋಧನೆ ಮಾಡಲಾಗುತ್ತಿದ್ದು, ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳಂತೆ 3.52 ಲಕ್ಷ ವಿದ್ಯಾರ್ಥಿಗಳಿಗೆ ಈ ಪೂರಕ ಬೋಧನೆಗೆ 7,049 ಶಾಲೆಗಳಲ್ಲಿ ಪ್ರತಿ ಶಾಲೆಗೆ ಇಬ್ಬರು ಶಿಕ್ಷರನ್ನು ನಿಯೋಜಿಸಲು ಆದೇಶದಲ್ಲಿ ಸೂಚಿಸಲಾಗಿದೆ.







