ವಿವಿಪಿಎಟಿ ವ್ಯವಸ್ಥೆಗೆ ಹಣ ಒದಗಿಸಿ: ಕೇಂದ್ರ ಸರಕಾರಕ್ಕೆ ಚುನಾವಣಾ ಆಯುಕ್ತರ ಮನವಿ

ಹೊಸದಿಲ್ಲಿ, ಎ.17: ಮತದಾರರು ತಾವು ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ದೃಢಪಡಿಸಿಕೊಳ್ಳಲು ನೆರವಾಗುವ ವೋಟರ್ ವೆರಿಫೈಯ್ಡ ಪೇಪರ್ ಆಡಿಟ್ ಟ್ರಯಲ್ಸ್(ವಿವಿಪಿಎಟಿ) ವ್ಯವಸ್ಥೆಯನ್ನು ಖರೀದಿಸಲು ಅಗತ್ಯವಿರುವ ಹಣವನ್ನು ತಕ್ಷಣ ಒದಗಿಸುವಂತೆ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಕೇಂದ್ರ ಸರಕಾರವನ್ನು ಕೋರಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ವಿವಿಪಿಎಟಿ ವ್ಯವಸ್ಥೆಯ ಬಳಕೆಯನ್ನು ಇನ್ನಷ್ಟು ವಿಳಂಬಗೊಳಿಸುವಂತಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರಿಗೆ ಬರೆದಿರುವ ಪತ್ರದಲ್ಲಿ ಝೈದಿ ತಿಳಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದ ಝೈದಿ, ವಿವಿಪಿಎಟಿಗಳ ಪೂರೈಕೆಗೆ 2017ರ ಫೆಬ್ರವರಿ ಮೊದಲು ಬೇಡಿಕೆ ಸಲ್ಲಿಸಿದರೆ ಮಾತ್ರ 2018ರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಸಂದರ್ಭ ಇವುಗಳ ಪೂರೈಕೆ ಸಾಧ್ಯ ಎಂದು ತಿಳಿಸಿದ್ದರು.
ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಭವಿಷ್ಯದಲ್ಲಿ ನಡೆಯುವ ಎಲ್ಲಾ ಚುನಾವಣೆಗಳಲ್ಲೂ ವಿವಿಪಿಎಟಿ ಸಹಿತ ಮತಯಂತ್ರ ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.







