ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ ಶ್ರೀರಾಮುಲು: ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ

ಬಳ್ಳಾರಿ, ಎ.17: ಬಳ್ಳಾರಿ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಪರ ಬಿಜೆಪಿ ಸಂಸದ ಶ್ರೀರಾಮುಲು ಮತಹಾಕಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಗೆ ಚುನಾವಣೆ ಬುಧವಾರ ನಡೆದಿದ್ದು, ಕಾಂಗ್ರೆಸ್‌ನ ಜಿ.ವೆಂಕಟರಮಣ ಮೇಯರ್ ಆಗಿ ಹಾಗೂ ಉಮಾದೇವಿ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪಾಲಿಕೆಯಲ್ಲೇ ಬಹುಮತ ಹೊಂದಿರುವ ಕಾಂಗ್ರೆಸ್ ನ ಅಭ್ಯರ್ಥಿಗಳ ಎರಡು ಬಣಗಳ ನಡುವೆ ತೀವ್ರ ಸ್ಪರ್ಧೆಯೇರ್ಪಟ್ಟು, ಒಂದು ಬಣದಿಂದ ಮೇಯರ್ ಸ್ಥಾನದ ಅಭ್ಯರ್ಥಿಯಾಗಿ ವೆಂಕಟರಮಣ , ಉಪಮೇಯರ್ ಅಭ್ಯರ್ಥಿಯಾಗಿ ಉಮಾದೇವಿ ಸ್ಪರ್ಧಿಸಿದ್ದರು. ಇನ್ನೊಂದು ಬಣದಿಂದ ಗಾಜಲು ಶ್ರೀನಿವಾಸ ಮೇಯರ್ ಸ್ಥಾನದ ಅಭ್ಯರ್ಥಿಯಾಗಿ ಹಾಗೂ ಉಪಮೇಯರ್ ಸ್ಥಾನದ ಅಭ್ಯರ್ಥಿಯಾಗಿ ಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳಿಗೆ "ಬಿಜೆಪಿ ಮತ":
ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವೆಂಕಟರಮಣ ಪರವಾಗಿ ಬಿಜೆಪಿ ಸಂಸದ ಶ್ರೀರಾಮುಲು ಮತ್ತು ಇತರ ನಾಲ್ವರು ಬಿಜೆಪಿ ಸದಸ್ಯರು ಮತ ಚಲಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ವೆಂಕಟರಮಣ ಆಯ್ಕೆಯಾಗಿರುವ ಬಣ ನನ್ನದು. ನಗರದ ಅಭಿವೃದ್ಧಿ 3 ವರ್ಷಗಳಿಂದ ಕುಂಠಿತಗೊಂಡಿದ್ದು, ಸದಸ್ಯರ ಭಿನ್ನಾಭಿಪ್ರಾಯದಿಂದ ಜನರು ತೊಂದರೆ ಅನುಭವಿಸಬಾರದು ಎನ್ನುವ ನಿಟ್ಟಿನಲ್ಲಿ ಮತ ಚಲಾಯಿಸಿದೆ" ಎಂದಿದ್ದಾರೆ.
ರಾಜ್ಯದಲ್ಲಿ ನಡೆಯಿತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ರಾಜಕೀಯ ಸಮರ ಬಿರುಸುಗೊಳ್ಳುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಬಿಜೆಪಿ ಸಂಸದ ಶ್ರೀರಾಮುಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಮತ ಚಲಾಯಿಸಿರುವುದು ಇದೀಗ ಚರ್ಚೆಯ ವಿಷಯವಾಗಿದೆ.







