ದ.ಕ ಜಿಲ್ಲೆಗೆ ಕಾರ್ಮಿಕ ಭವನ ನಿರ್ಮಾಣ ಮಂಜೂರು: ಐವನ್ ಡಿಸೋಜ

ಮಂಗಳೂರು, ಎ.17:ನಗರದ ಕದ್ರಿ ಹಿಲ್ಸ್ ಬಳಿ ಸುಮಾರು 4 ಕೋ.ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣ ಮಾಡಲು ಸರಕಾರ 2.50 ಕೋ.ರೂ. ಬಿಡುಗಡೆ ಮಾಡಿದೆ ಎಂದು ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬೃಹತ್ ಸಂಖ್ಯೆಯ ಕಾರ್ಮಿಕರಿದ್ದಾರೆ. ಜೊತೆಗೆ ಜಿಲ್ಲಾ ಕಾರ್ಮಿಕ ಕಲ್ಯಾಣ ಇಲಾಖೆಯೂ ಸ್ವಂತ ಕಟ್ಟಡವಿಲ್ಲದೆ ಮಾಸಿಕ ಸುಮಾರು ಒಂದು ಲಕ್ಷ ಮೊತ್ತದ ಬಾಡಿಗೆಯನ್ನು ನೀಡಲಾಗುತ್ತಿದೆ. ನಗರದ ಕದ್ರಿ ಹಿಲ್ಸ್ ಬಳಿ ಗುರುತಿಸಲಾದ ಪ್ರದೇಶದಲ್ಲಿ ಮುಂದಿನ 11 ತಿಂಗಳ ಒಳಗೆ ಈ ಭವನ ನಿರ್ಮಾಣವಾಗಲಿದ್ದು, ಇದು ರಾಜ್ಯದ ಏಳನೆ ಭವನವಾಗಲಿದೆ. ಕೆಪಿಟಿಯ ಬಾಲಕರ ವಿದ್ಯಾರ್ಥಿ ನಿಲಯ ದುರಸ್ತಿ ಕಾಮಗಾರಿಗೆ ಸರಕಾರದಿಂದ 60 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಐವನ್ ಡಿಸೋಜ ತಿಳಿಸಿದ್ದಾರೆ.
ಮರವೂರು ಪ್ರದೇಶದಲ್ಲಿ ಬಹುನಿರೀಕ್ಷೆಯ ಮರವೂರು ಸೇತುವೆಯನ್ನು 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪ ಸರಕಾರದ ಮುಂದಿದೆ. ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ 3 ಜನ ಅರ್ಜಿದಾರರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1,29,541 ರೂ. ಬಿಡುಗಡೆಯಾಗಿದ್ದು, ಸುಳ್ಯದ ರೇವತಿ -60 ಸಾವಿರ, ಮುಹಮ್ಮದ್ ಕಣ್ಣೂರ್-40 ಸಾವಿರ, ಜಮೀಲಾ ಪಡೀಲ್ -29,541 ರೂ. ಮಂಜೂರಾಗಿದೆ ಎಂದು ಐವನ್ ತಿಳಿಸಿದ್ದಾರೆ.
ಅಹ್ಮದ್ ಖುರೇಶಿ ಪ್ರಕರಣ ಸಿಐಡಿಗೆ: ಸಿಸಿಬಿ ಪೊಲೀಸರಿಂದ ದೌರ್ಜನ್ಯ ಪ್ರಕರಣದ ಸಂತ್ರಸ್ತ ಹಾಗೂ ಹಳೆ ಪ್ರಕರಣವೊಂದರ ಆರೋಪಿಯಾಗಿ ಬಂಧನದಲ್ಲಿರುವ ಅಹ್ಮದ್ ಖುರೇಶಿ ಪ್ರಕರಣವನ್ನು ಸರಕಾರದ ಗೃಹ ಇಲಾಖೆ ಸಿಐಡಿ ತನಿಖೆಗೆ ಒಪ್ಪಿಸಲು ನಿರ್ಧರಿಸಿದೆ.
‘‘ಅಹ್ಮದ್ ಖುರೇಶಿಯನ್ನು ನಾನು ಭೇಟಿ ಮಾಡಿದ್ದೇನೆ. ಆತ ತಾನು ಅಮಾಯಕ ಎಂದಿದ್ದಾನೆ. ಈ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು. ಸತ್ಯಾಂಶ ಏನು ಎನ್ನುವುದು ಹೊರಬರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮತ್ತು ಖುರೇಶಿ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಗೆ ಸಂಘಟನೆಗಳು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ’’ ಎಂದು ಐವನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮನಪಾ ಸದಸ್ಯ ಡಿ.ಕೆ.ಅಶೋಕ್ ಕುಮಾರ್, ಮಾಜಿ ಮನಪಾ ಸದಸ್ಯ ನಾಗೇಂದ್ರ ಹಾಗೂ ಸ್ಥಳೀಯ ಕಾಂಗ್ರೆಸ್ ಘಟಕದ ಸದಸ್ಯರಾದ ಐ ಮೋನು ಕಣ್ಣೂರು, ಹಬೀಬ್ ಕಣ್ಣೂರು, ನವೀನ್ ಸ್ಟಿವನ್, ಮುದಸ್ಸಿರ್ ಕುದ್ರೋಳಿ, ವಸಂತ್ ವೀರನಗರ, ನವಾಝ್ ಜೆಪ್ಪು, ಮಹೇಶ್ ಕೊಡಿಕಲ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.







