ಯಕ್ಷಗಾನ ಕಲಿಕೆಗೆ ಪದವಿ ಕೋರ್ಸ್ ಅಗತ್ಯ: ಡಾ.ಎಂ.ಮೋಹನ್ ಆಳ್ವ
ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಶಸ್ತಿ ಪ್ರದಾನ

ಉಳ್ಳಾಲ, ಎ.17: ವಿದ್ಯೆ ಮತ್ತು ಬುದ್ಧಿಯ ಜೊತೆ ಕಲೆ ಜೋಡಣೆಯಾಗಬೇಕು. ಭರತನಾಟ್ಯ, ಕಥಕ್ಕಳಿಗೆ ಇರುವಂತಹ ಪದವಿ ಕೋರ್ಸ್ ಯಕ್ಷಗಾನ ಕಲೆಗೂ ಬಂದರೆ ಮೊದಲು ತಮ್ಮ ಸಂಸ್ಥೆಯಲ್ಲಿ ಅದನ್ನು ಆರಂಭಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸೋಮವಾರ ವಿವಿ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ, ಸಾಂಸ್ಕೃತಿಕ ನೀತಿಗಳು ಕೇವಲ ಸರಕಾರದ ಯೋಜನೆಗಳು ಎನ್ನುವ ಭಾವನೆಯಿಂದ ಹೊರಬಂದು ಜೀವನದ ಪ್ರಧಾನ ಅಂಗವಾಗಿ ಸ್ವೀಕರಿಸಿ ಸಮಾಜಕ್ಕೆ ಕೊಡುಗೆ ನೀಡುವ ದೊಡ್ಡ ಗುಣ ನಮ್ಮದಾಗಬೇಕು. ಎಲ್ಲ ಕಾರ್ಯಕ್ರಮಗಳು ಕೇಂದ್ರ ಅಥವಾ ರಾಜ್ಯ ಸರಕಾರ ಮಾಡಬೇಕು ಎಂದು ನಂಬಿ ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಧಾರ್ಮಿಕ, ಶೈಕ್ಷಣಿಕ ವಿಚಾರದಲ್ಲಿ ಜನರು ಸರಕಾರವನ್ನು ನಂಬದೆ ತಮ್ಮದೇ ಆದ ನಿಲುವಿನಿಂದ ಮುನ್ನಡೆಸಿಕೊಂಡು ಬಂದಿರುವುದರಿಂದ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದವರು ಅಭಿಪ್ರಾಯಿಸಿದರು.
ಸನ್ಮಾನಿತರ ಪರವಾಗಿ ಮಾತನಾಡಿದ ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ, ಯಕ್ಷಗಾನದಲ್ಲಿ ಆಸಕ್ತಿಯಿರುವವರಿಗೆ ಅವಕಾಶ ನೀಡಲು 2 ವರ್ಷದ ಡಿಪ್ಲೊಮಾ ಕೋರ್ಸ್ ಆರಂಭಿಸಬೇಕಿದೆ. ಸಾಂಪ್ರದಾಯಿಕ ಕಲೆಯಲ್ಲಿ ಅನಗತ್ಯ ವಿಚಾರ ನುಸುಳಿದರೆ ಹೊರಹೋಗುವುದು ಕಷ್ಟ. ಕಲೆ ವಿರೂಪ ಗೊಳ್ಳುತ್ತಿರುವುದನ್ನು ತಡೆಯುವ ಸಲುವಾಗಿ ಎಲ್ಲರೂ ಜೊತೆಯಾಗಿ ಕುಳಿತು ವಿಮರ್ಶೆ ಮಾಡಬೇಕು ಎಂದರು.
ಯಕ್ಷಮಂಗಳ, ಕೃತಿ ಪ್ರಶಸ್ತಿ ಪ್ರದಾನ
2016ನೆ ಸಾಲಿನ 25 ಸಾವಿರ ರೂ. ನಗದು ಸಹಿತ ‘ಯಕ್ಷಮಂಗಳ ಪ್ರಶಸ್ತಿ’ಗೆ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಬಲಿಪ ನಾರಾಯಣ ಭಾಗವತ, ತಾಳಮದ್ದಳೆ ಅರ್ಥದಾರಿ, ಸಂಶೋಧಕ ಡಾ.ಪ್ರಭಾಕರ ಜೋಶಿ, ಬಡಗುತಿಟ್ಟಿನ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪಮತ್ತು ಹಿಮ್ಮೇಳ ತಜ್ಞ ಗೋಪಾಲಕೃಷ್ಣ ಕುರುಪ್ ಹಾಗೂ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ ‘ಯಕ್ಷಗಾನ ಕವಿ ಕಾವ್ಯ ವಿಹಾರ’ ಕೃತಿಗೆ ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕೆ.ಎಂ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಚಿನ್ನಪ್ಪಗೌಡ ಶುಭ ಹಾರೈಸಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಡಾ.ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.







