ದಲಿತರನ್ನು ಮನುಷ್ಯರಂತೆ ನೋಡಿ: ಡಾ. ಪರಮೇಶ್ವರ್
ಬೆಂಗಳೂರು, ಎ.17: ಸಮಾಜ ಬದಲಾವಣೆಗಿಂತ ಮನಸ್ಸುಗಳ ಬದಲಾವಣೆಯಾಗಬೇಕಿದೆ.ದಲಿತರು ಈ ಮಣ್ಣಿನ ಜನರು. ಅವರನ್ನು ಮನುಷ್ಯರಂತೆ ಕಾಣಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ನಗರದ ಜಕ್ಕೂರು ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಹಾಗೂ ಸಮಾಜವಾದಿ ಜಾತ್ಯತೀತ ಸಂಘಟನೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂಬೇಡ್ಕರ್ ಪರಿವರ್ತನೆಯ, ಬದಲಾವಣೆಯ ಹರಿಕಾರರು. ಸಮಾನತೆಗಾಗಿ ಅಸ್ಪೃಶ್ಯತೆಯನ್ನು ತೊಲಗಿಸಲು ಜೀವನ ಪರ್ಯಂತ ಹೋರಾಡಿದರು ಎಂದು ಹೇಳಿದರು.
ಇಡೀ ದೇಶ ಜಾತಿ ವ್ಯವಸ್ಥೆ ಮೇಲೆ ನಿಂತಿದೆ. ಅಂತರ್ ಜಾತಿ ವಿವಾಹಗಳಾದರೆ ಹತ್ಯೆಗಳು ನಡೆಯುತ್ತಿವೆ.ಇದರಿಂದ ಅಂಬೇಡ್ಕರ್ ಅವರ ಆಶಯಕ್ಕೆ ಧಕ್ಕೆಯಾಗಿದೆ ಎಂದು ತಿಳಿಸಿದರು.
ಜಾತೀಯತೆ ಎಂಬ ವಿಚ ಬೀಜವನ್ನು ಎಲ್ಲ ರಂಗಗಳಲ್ಲೂ ಬಿತ್ತಲಾಗುತ್ತಿದೆ.ಸ್ವಾತಂತ್ರ ಬಂದು ಏಳು ದಶಕಗಳು ಸಮೀಪಿಸುತ್ತಿದ್ದರೂ ಇನ್ನೂ ಜಾತೀಯತೆ ಹೋಗಿಲ್ಲ. ಮೇಲು-ಕೀಳು ಭಾವನೆ ತೊಲಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಮೇಯರ್, ಪದ್ಮಾವತಿ, ಉಪ ಮೇಯರ್ ಆನಂದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಕೆಸಿಡಿಸಿ ಮಾಜಿ ಅಧ್ಯಕ್ಷ ಡಾ.ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.