ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖಾ ಕಚೇರಿಗೆ ಡಿ.ಸಿ. ದಿಢೀರ್ ಭೇಟಿ: ಇಬ್ಬರು ನೌಕರರಿಗೆ ಶೋಕಾಸ್ ನೋಟಿಸ್!

ಶಿವಮೊಗ್ಗ, ಎ.17: ಶಿವಮೊಗ್ಗದ ರಾಜೇಂದ್ರ ನಗರ ಬಡಾವಣೆ ಸಮೀಪದ 100 ಅಡಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿವಿಧ ಕಡತಗಳ ಕೂಲಂಕಷ ಪರಿಶೀಲನೆ ನಡೆಸಿದ ಅವರು, ನಾಲ್ಕೈದು ವರ್ಷಗಳ ಕಡತ ವಿಲೇವಾರಿಯ ಮಾಹಿತಿ ಪಡೆದು, ಇಲಾಖೆಯ ಅಧಿಕಾರಿ-ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ ಕಡತಗಳ ಸಮರ್ಪಕ ವಿಲೇವಾರಿ ಮಾಡದಿರುವುದು, ಕಳೆದ ನಾಲ್ಕು ವರ್ಷಗಳಿಂದ ಹಣಕಾಸಿನ ವಹಿವಾಟಿನ ಲೆಕ್ಕಪತ್ರ ಸರಿಯಾಗಿಲ್ಲದಿರುವುದು, ಅಂಬೇಡ್ಕರ್ ವನ ಲೆಕ್ಕಪತ್ರ ನಿರ್ವಹಣೆ ವೈಫಲ್ಯ ಸೇರಿದಂತೆ ಹತ್ತು ಹಲವು ರೀತಿಯ ಸಮಸ್ಯೆಗಳು ಜಿಲ್ಲಾಧಿಕಾರಿಯ ಗಮನಕ್ಕೆ ಬಂದವು.
ಇದರಿಂದ ತೀವ್ರ ಅಸಮಾಧಾನಗೊಂಡ ಡಾ. ಎಂ. ಲೋಕೇಶ್, ಇಲಾಖಾಧಿಕಾರಿ ಹಾಗೂ ನೌಕರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. "ಇನ್ನು ಮುಂದೆ ಸರಿಯಾಗಿ ಕೆಲಸ ಮಾಡಿ. ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ’ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಹಾಗೆಯೇ ಲೆಕ್ಕಪತ್ರದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾದ ಇಬ್ಬರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದಾರೆ.
ನಿರ್ವಹಣೆಯೇ ಇಲ್ಲ: ಕಚೇರಿಗೆ ಸರ್ಕಾರ ಹಾಗೂ ವಿವಿಧ ಮೂಲಗಳಿಂದ ಬಿಡುಗಡೆಯಾದ ಮೊತ್ತ ಮತ್ತು ಮಾಡಿದ ವೆಚ್ಚದ ಕುರಿತಂತೆ ಕಳೆದ ನಾಲ್ಕೈದು ವರ್ಷಗಳ ವಿವರಗಳ ಮಾಹಿತಿಯನ್ನು ಇಲಾಖೆಯ ಲೆಕ್ಕಪತ್ರ ವಿಭಾಗದ ಸಿಬ್ಬಂದಿ ನಿರ್ವಹಣೆ ಮಾಡಿದಿರುವುದು ಕಂಡುಬಂತು. ಹಾಗೆಯೇ ಅಂಬೇಡ್ಕರ್ ವನದ ನಿರ್ವಹಣೆಗೆ ಸಂಬಂಧಿಸಿದ ಲೆಕ್ಕಪತ್ರದ ಸ್ಥಿತಿಯೂ ಕೂಡ ಇದೇ ರೀತಿಯಲ್ಲಿರುವುದು ಡಿ.ಸಿ.ಯವರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಎರಡು ವಿಭಾಗಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದಾರೆ.







