ದಾವಣಗೆರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಧರಣಿ
ದಾವಣಗೆರೆ: ಕೇಂದ್ರ ಸರಕಾರ ಭಡ್ತಿ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಪಾರ್ಲಿಮೆಂಟ್‌ನಲ್ಲಿ ಅಂಗೀಕರಿಸುವಂತೆ ಆಗ್ರಹಿಸಿ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಧರಣಿ ನಡೆಸಿದರು.
ಸೋಮವಾರ ರಾಜ್ಯಾದ್ಯಂತ ಸಮಿತಿಯಿಂದ ಹಮ್ಮಿಕೊಳ್ಳಲಾಗಿರುವ ಮುಷ್ಕರಕ್ಕೆ ಸಾಥ್ ನೀಡಿದ ಕಾರ್ಯಕರ್ತರು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
ಸಂದರ್ ಸಮಿತಿಯ ಪ್ರಧಾನ ಸಂಚಾಲಕ ಹೆಚ್. ನಿಂಗಪ್ಪ ಮಾತನಾಡಿ, ಸುಪ್ರೀಂಕೋರ್ಟ್ ಭಡ್ತಿ ಮೀಸಲಾತಿ ವಿರುದ್ಧ ನೀಡಿರುವ ತೀರ್ಪನ್ನು,ರಾಜ್ಯ ಸರಕಾರ ಪ್ರಶ್ನಿಸಿ ಪುನರ್ ಪರೀಶೀಲನೆಗೆ ಮೇಲ್ಮನವಿ ಸಲ್ಲಿಸಬೇಕು. ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ವಕೀಲರ ತಂಡವನ್ನು ನಿಯೋಜಿಸಬೇಕು ಭಡ್ತಿ ಮೀಸಲಾತಿ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಭಡ್ತಿ ಮೀಸಲಾತಿ ಸಂರಕ್ಷಿಸಲು ಸಂವಿಧಾನ ತಿದ್ದುಪಡಿ ಮಸೂದೆ ರಾಜ್ಯ ಸಭೆಯಲ್ಲಿ ಅಂಗೀಕಾರವಾಗಿದ್ದು, ಲೋಕಸಭೆಯು ಸಹ ಸಂವಿಧಾನ ತಿದ್ದುಪಡಿಯ ವಿಧೇಯಕವನ್ನು ಅಂಗೀಕರಿಸಿ ಸಂವಿಧಾನದ 9ನೆ ಪರಿಶ್ಚೇದದಡಿ ಸೇರ್ಪಡಿಸಬೇಕು,ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪ.ಜಾತಿ, ಪಂಗಡ ಹಿಂದುಳಿದ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ತಿಪ್ಪೇಶಿ ಮಾಳಗಿ, ನೀಲಪ್ಪ ಕೈದಾಳೆ, ಬಿ.ಎನ್. ನಾಗೇಶ್, ಜಿಲ್ಲಾ ಖಜಾಂಚಿ ಜಗಳೂರು ಮಲ್ಲೇಶಪ್ಪ, ಎ.ಡಿ. ಯಶವಂತಪ್ಪ, ಜಯಶ್ರೀ ರಾಮಪ್ಪ ಮತ್ತಿತರರು ಇದ್ದರು.







