ಎಲ್ಲ ರೀತಿಯ ಗೋಹತ್ಯೆ ನಿಲ್ಲಿಸಿ: ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ
ಬೆಂಗಳೂರು, ಎ.17: ಗೋಹತ್ಯೆ ಎಂದರೆ ಕೇವಲ ಅಂಗಡಿಗೆ ಸೀಮಿತವಾಗಿಲ್ಲ, ವಿದೇಶಕ್ಕೆ ಅಪಾರ ಪ್ರಮಾಣದಲ್ಲಿ ರಫ್ತು ಆಗುವ ಗೋಮಾಂಸವನ್ನು ನಿಲ್ಲಿಸಬೇಕು. ಈ ಸಂಬಂಧ ದೇಶದೆಲ್ಲೆಡೆ ಒಂದೇ ಕಾನೂನು ರೂಪಿಸಬೇಕೆಂದು ಆಲ್ ಇಂಡಿಯಾ ಆರ್ಗನೈಝೇಶನ್‌ನ ಆಫ್ ಇಮಾಮ್ಸ್ ಆಫ್ ಮಸ್ಜಿದ್ ಅಧ್ಯಕ್ಷ ಡಾ.ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಹೇಳಿದ್ದಾರೆ.
ಸೋಮವಾರ ಇಲ್ಲಿನ ಆರ್.ಟಿ. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದೆಲ್ಲೆಡೆ ಗೋಹತ್ಯೆ ವಿಚಾರವಾಗಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದೇಶಕ್ಕೆ ಒಂದೇ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು.
135 ಮಸೀದಿಯಲ್ಲಿ ನಮಾಝ್: ಭಾರತೀಯ ಪುರಾತತ್ವ ಇಲಾಖೆ ಅಡಿಯಲ್ಲಿ ವಿವಿಧ ರಾಜ್ಯಗಳಲ್ಲಿ 135 ಐತಿಹಾಸಿಕ ಮಸೀದಿಗಳಲ್ಲಿ ನಮಾಝ್ ಮಾಡಲು ಅವಕಾಶ ಕಲ್ಪಿಸಬೇಕೆಂದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮುಸ್ಲಿಮ್ ಸಮಸ್ಯೆಗಳ ಪರಿಹಾರದ ಬಗ್ಗೆ ಆಲ್ ಇಂಡಿಯಾ ಆರ್ಗನೈಝೇಶನ್‌ನ ಆಫ್ ಇಮಾಮ್ಸ್ ಆಫ್ ಮಸ್ಜಿದ್ ವತಿಯಿಂದ ಹೊಸದಿಲ್ಲಿಯಲ್ಲಿ ಬೃಹತ್ ಮುಸ್ಲಿಮ್ ಸಮಾವೇಶ ಏರ್ಪಡಿಸಲಾಗುವುದು. ಅದೇ ರೀತಿ, ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದರು.







