ಬರ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಸಿಎಂ ಇಂದು ಸಮಾಲೋಚನೆ
ಬೆಂಗಳೂರು, ಎ. 17: ರಾಜ್ಯದಲ್ಲಿನ ತೀವ್ರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎ.18ರಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಕಾನ್ಫ್‌ರೆನ್ಸ್ ನಡೆಸಲಿದ್ದಾರೆ.
ಕುಡಿಯುವ ನೀರು, ರೈತರಿಗೆ ಬೆಳೆನಷ್ಟ ಪರಿಹಾರ ವಿತರಣೆ, ಜಾನುವಾರುಗಳಿಗೆ ಮೇವು-ನೀರು, ಗೋಶಾಲೆಗಳ ಸ್ಥಾಪನೆ, ಸೇರಿದಂತೆ ಬರ ಪೀಡಿತ ಪ್ರದೇಶಗಳಲ್ಲಿನ ಪರಿಹಾರ ಕಾರ್ಯಗಳು ಬಗ್ಗೆ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಲಿದ್ದಾರೆ.
ಮೂವತ್ತು ಜಿಲ್ಲೆಗಳ 170 ತಾಲೂಕುಗಳ ಪೈಕಿ 160 ತಾಲೂಕುಗಳು ಬರ ಪೀಡಿತವೆಂದು ಈಗಾಗಲೇ ಘೋಷಿಸಿದ್ದು, ಒಟ್ಟು 1,147ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಖಾಸಗಿ ಕೊಳವೆ ಬಾವಿಗಳನ್ನು ಸರಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಕುಡಿಯುವ ನೀರಿಗೆ ಇನ್ನೂ 200 ಕೋಟಿ ರೂ.ಹಣಕಾಸಿನ ಅಗತ್ಯವಿದ್ದು, ಅಧಿಕಾರಿಗಳಿಂದ ಈ ಸಂಬಂಧ ಪ್ರಸ್ತಾವನೆ ಸ್ವೀಕರಿಸಲಿದ್ದಾರೆ.
ಜಾನುವಾರುಗಳು ಸೇರಿದಂತೆ ರಾಸುಗಳಿಗೂ ಅಗತ್ಯ ಮೇವು ಮತ್ತು ಕುಡಿಯುವ ನೀರು ಒದಗಿಸಬೇಕು. ಅಲ್ಲದೆ, ಅಗತ್ಯವಿರುವ ಪ್ರದೇಶಗಳಲ್ಲಿ ಗೋಶಾಲೆ, ಮೇವು ಬ್ಯಾಂಕು ಸ್ಥಾಪಿಸಲು ಸೂಚಿಸಲಿದ್ದಾರೆ. ಈಗಾಗಲೇ ಹೊರ ರಾಜ್ಯದಿಂದ ಮೇವು ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ತ್ವರಿತವಾಗಿ ಮೇವು ಪೂರೈಕೆಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆಂದು ತಿಳಿದು ಬಂದಿದೆ.







