ಮೋದಿ ದೇಶವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ, ಈಗಲೇ ಎಚ್ಚೆತ್ತುಕೊಳ್ಳಿ: ಕುಮಾರಸ್ವಾಮಿ

ಕಾಪು, ಎ.17: ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಂದು ವಿಷಯದಲ್ಲೂ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದಾರೆ. ದೇಶವನ್ನು ತಪ್ಪುದಾರಿಗೆ ಎಳೆಯು ತ್ತಿದ್ದಾರೆ. ದೇಶದ ಜನತೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜಾತ್ಯಾತೀತ ಜನತಾ ದಳದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕಾಪು ಶ್ರೀನಾರಾಯಣಗುರು ಸಭಾಭವನದಲ್ಲಿ ಸೋಮವಾರ ನಡೆದ ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶ ಎರಡನೇ ಬಾರಿಗೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡರೆ ಮತ್ತೆಂದೂ ಅದು ದಕ್ಕುವುದಿಲ್ಲ ಎಂದು 1950ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಚ್ಚರಿಕೆ ನೀಡಿದ್ದರು. ಕೆಲವೇ ದಿನಗಳಲ್ಲಿ ಇದು ನಿಜವಾಗಬಹುದು. ಕಳೆದ ಮೂರ್ನಾಲ್ಕು ವರ್ಷಗಳಿಂದ "ಮೋದಿ, ಮೋದಿ" ಎಂದು ‘ಹಾಡುವ’ ಜನ ಕೈಮೀರುವ ಮೊದಲೇ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದವರು ನುಡಿದರು.
ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ, ಯುಪಿಎ ಸರಕಾರದ ಆಧಾರ್ ಯೋಜನೆಯನ್ನು ಪ್ರಬಲವಾಗಿ ವಿರೋಧಿಸಿದ್ದ ಮೋದಿ, ಅಧಿಕಾರಕ್ಕೇರಿದ ಬಳಿಕ ಈಗ ಪ್ರತಿಯೊಂದಕ್ಕೂ ಆಧಾರ್‌ನ್ನು ಕಡ್ಡಾಯಗೊಳಿಸಿದ್ದಾರೆ. ಅದೇ ರೀತಿ ಜಿಎಸ್‌ಟಿಯನ್ನು ಖಂಡತುಂಡವಾಗಿ ಖಂಡಿಸಿದ್ದ ಅವರು ಈಗ ಅದರ ಜಾರಿಗೆ ಯಾವುದಕ್ಕೂ ಹಿಂಜರಿಯಲಿಲ್ಲ. ಆದುದರಿಂದ ದೇಶದ ಜನತೆ ಮೋದಿ ಅವರ ಇಬ್ಬಗೆ ನೀತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರಕಾರ, 2018ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆಯೇ ಹೊರತು ಬರದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿಲ್ಲ. ನೀರಿಗಾಗಿ ಪರಿತಪಿಸುತ್ತಿರುವ ಜನರ, ಪಶುಕರುಗಳ, ಪ್ರಾಣಿಗಳ ಸಂಕಷ್ಟಕ್ಕೆ ಸ್ಪಂದಿಸುವುದನ್ನೇ ಅದು ಮರೆತು ಬಿಟ್ಟಿದೆ ಎಂದವರು ದೂರಿದರು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮೇಲೆಯೇ ಮರಳು ಮಾಫಿಯಾ ಹಲ್ಲೆ ನಡೆಸುತ್ತದೆ ಎಂದಾದರೆ, ಇನ್ನು ಜನಸಾಮಾನ್ಯರಿಗೆ ರಕ್ಷಣೆ ಎಲ್ಲಿದೆ. ಜನರಿಗೆ ಮರಳು ಸಿಗದೇ ಮರಳು ಮಾಫಿಯಾ ಸ್ವೇಚ್ಛಾಚಾರದಿಂದ ಮರಳು ಲೂಟಿ ಹೊಡೆಯುತ್ತಿದೆ. ಮರಳು ದಂಧೆ ಪ್ರಾರಂಭಗೊಂಡಿದ್ದೇ ಬಿಜೆಪಿ ಕಾಲದಲ್ಲಿ. ಈಗ ಕಾಂಗ್ರೆಸ್ ಅದನ್ನು ನಗದೀಕರಿಸುತ್ತಿದೆ. ಒಟ್ಟಿನಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಇಲ್ಲಿ ರಕ್ಷಣೆ ಇಲ್ಲ ಎಂದರು.
ಸಭೆಯನ್ನುದ್ದೇಶಿಸಿ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಮೂಡಿಗೆರೆ ಶಾಸಕ, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿದರು.
ಜೆಡಿಎಸ್ ನಾಯಕರಾದ ಅಮರನಾಥ ಶೆಟ್ಟಿ, ಸುಧಾಕರ ಶೆಟ್ಟಿ, ಶಾಲಿನಿ ಶೆಟ್ಟಿ ಕೆಂಚನೂರು, ಇಸ್ಮಾಯಿಲ್ ಪಲಿಮಾರು ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಅಧ್ಯಕ್ಷ ಯೋಗೇಶ್ ಶೆಟ್ಟಿ ಬಾಲಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಾಧ್ಯಕ್ಷ ವಾಸುದೇವ ರಾವ್ ಅತಿಥಿಗಳನ್ನು ಸ್ವಾಗತಿಸಿದರು.







