ಭಟ್ಕಳ: ಉರಿಯುವ ಧಗೆಯೊಂದಿಗೆ ಕುಡಿಯುವ ನೀರಿಗೂ ಹಾಹಾಕಾರ

ಭಟ್ಕಳ, ಎ.17: ಭಟ್ಕಳ ತಾಲೂಕಿನಾದ್ಯಂತ ಸೂರ್ಯನ ಪ್ರಕೋಪ ಹೆಚ್ಚಾಗಿದ್ದು, ಉರಿಯುವ ಧಗೆಯೊಂದಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಬಾವಿಗಳೆಲ್ಲಾ ಬತ್ತಿಹೋಗಿದೆ.
ಬೋರ್ವೆಲ್ ಗಳ ಕೊರತೆಯಿಂದಾಗಿ ಜಲಮೂಲಕ್ಕೆ ಧಕ್ಕೆಯುಂಟಾಗಿದ್ದು, ಮೇ ತಿಂಗಳಲ್ಲಿ ಉಂಟಾಗುವ ಕುಡಿಯುವ ನೀರಿನ ಬವಣೆ ಎಪ್ರಿಲ್ ಆರಂಭದಲ್ಲಿ ಕಾಣಿಸಿಕೊಂಡಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಂತೂ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಸರ್ಕಾರದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಯಾವಾಗ ಮಾಡುತ್ತಾರೆ ಎಂದು ಜನತೆ ಕಾದುಕುಳಿತಿದ್ದಾರೆ.
ತಾಲೂಕಿನಲ್ಲಿ ಬಿಸಿಲ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಹೊಳೆ, ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿಯ ತೊಡಗಿದೆ. ಕಳೆದ ವರ್ಷಕ್ಕಿಂತ ತಾಲ್ಲೂಕಿನಲ್ಲಿ ಈ ಬಾರಿ ತಾಪಮಾನ ಏರಿಕೆ ಕಂಡಿದೆ. ತಾಲ್ಲೂಕಿನಲ್ಲಿ ಗರಿಷ್ಟ 33-35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದೆ. ಬೆಳಗಿನ ಸಂದರ್ಭಲ್ಲಿ ಮನೆಯಿಂದ ಹೊರಬರುವುದೇ ಬೇಡ ಎನ್ನುವ ಸ್ಥಿತಿ ಉಂಟಾಗಿದೆ. ನೀರಿನ ಅಭಾವ ತೀವ್ರಗೊಂಡಿದ್ದರಿಂದ ಕೆಲವು ಪ್ರದೇಶದಲ್ಲಿ ಜನರು ಒಂದು ಕೊಡ ನೀರಿಗೂ ಪರದಾಡುವ ಸ್ಥಿತಿ ಉಂಟಾಗಿದೆ.
ತಾಲ್ಲೂಕಿನಲ್ಲಿ ಕೆಲವು ಕಡೆ ಸರಕಾರಿ ಬಾವಿಗಳಿದ್ದು, ಅದರಲ್ಲಿ ನೀರಿನ ಪ್ರಮಾಣ ಇದ್ದರೂ ಸಮರ್ಪಕ ನಿರ್ವಹಣೆಯ ಕೊರತೆಯಿಂದ ನೀರು ಕಲುಶಿತವಾಗಿ ಅಥವಾ ಉಪ್ಪು ನೀರು ಮಿಶ್ರಿತವಾಗಿ ಕುಡಿಯಲು ಅಯೋಗ್ಯವಾಗಿದೆ. ಇನ್ನೂ ಕೆಲವು ಕಡೆ ನೀರು ಒಣಗಿ ತಿಂಗಳುಗಳೇ ಕಳೆದಿವೆ. ಗ್ರಾಮೀಣ ಹಾಗೂ ಪಟ್ಟಣದ ಸರಕಾರಿ ಬಾವಿಗಳಲ್ಲಿ ತುಂಬಿರುವ ಹೂಳನ್ನು ತೆಗೆಸಿದಲ್ಲಿ ಬೇಸಿಗೆಯಲ್ಲಿ ಸ್ವಲ್ಪ ಮಟ್ಟಿಗಾದರೂ ನೀರು ಇರಲಿರುವುದರಿಂದ ಸಂಬಂಧಪಟ್ಟ ಇಲಾಖೆ ಈ ಕಾರ್ಯವನ್ನು ಮಾಡಲು ಮುಂದಾಗಬೇಕಿದೆ.
ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದರಿಂದ ಕುಡಿಯುವ ನೀರಿಗೆ ಭಾರೀ ಅಭಾವ ಉಂಟಾಗಿದೆ. ಕಳೆದ ವರ್ಷ ಇಷ್ಟೊತ್ತಿಗಾಗಲೇ ತಾಲ್ಲೂಕು ಆಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿತ್ತು. ಆದರೆ ಈ ಸಲ ಇನ್ನೂ ಟ್ಯಾಂಕರ್ ನೀರು ಪೂರೈಕೆ ಆರಂಭಿಸದೇ ಇರುವುದು ಜನರಿಗೆ ತೊಂದರೆಯಾಗಿದೆ. ಮಾವಳ್ಳಿ, ಬೈಲೂರು, ಮಾವಿನಕುರ್ವೆ, ಕಾಯ್ಕಿಣಿ, ಮಾವಳ್ಳಿ-2, ಹೆಬಳೆ ಹನೀಪಾಬಾದ್, ಮುಟ್ಟಳ್ಳಿ, ಬೆಳಕೆ ಮುಂತಾದವ ನೀರಿನ ಅಭಾವ ತೀವ್ರ ಇರುವುದರಿಂದ ಈ ಭಾಗಕ್ಕೆ ಹೆಚ್ಚಿನ ನೀರು ಪೂರೈಕೆ ಮಾಡಬೇಕೆಂಬ ಆಗ್ರಹ ಕೇಳಿ ಬಂದಿದೆ. ಈ ಸಲ ಗ್ರಾಮೀಣ ಭಾಗದಲ್ಲೂ ನೀರಿನ ಅಭಾವ ಉಂಟಾಗಿದ್ದು, ಬಾವಿ, ಹೊಳೆ, ಕೆರೆಗಳು ಒಣಗಿರುವುದರಿಂದ ತೋಟಕ್ಕೆ ನೀರು ಹಾಯಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ರೈತರಿದ್ದಾರೆ.
ಹೆಚ್ಚಿನ ಕಡೆ ಒಂದಲ್ಲೊಂದು ಕಾರಣಕ್ಕೆ ಕಾಮಗಾರಿ ಕುಂಟುತ್ತಾ ಸಾಗಿದೆ. ಕೆಲವು ಕಡೆ ಬಾವಿ ತೆಗೆದು, ಟ್ಯಾಂಕ್ ನಿರ್ಮಿಸಿ, ಪೈಪ್ ಲೈನ್ ಅಳವಡಿಸಲಾಗಿದ್ದರೂ ಕೂಡ ನೀರಿನ ಸಂಪರ್ಕ ಮಾತ್ರ ನೀಡಿಲ್ಲ. ಇನ್ನೂ ಕೆಲವು ಕಡೆ ಶೇ. 80ರಷ್ಟು ಕಾಮಗಾರಿ ಮುಗಿದಿದ್ದರೂ ಬಾವಿಯಲ್ಲಿ ನೀರಿನ ಸೆಲೆ ಕಡಿಮೆಯಾಗಿರುವುದು ಯೋಜನೆ ಪೂರ್ಣಗೊಳ್ಳುವಿಕೆಗೆ ಹಿನ್ನಡೆಯಾದರೆ, ಮತ್ತೆ ಕೆಲವು ಕಡೆ ಬಾವಿ ತೆಗೆಯಲು ಜಾಗದ ಸಮಸ್ಯೆ ಇದೆ ಎನ್ನಲಾಗಿದೆ. ಸರಕಾರದಿಂದ ಮಂಜೂರಾದ ಈ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಮುಗಿದಿದ್ದರೆ ನೀರಿನ ಅಭಾವ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿತ್ತು. ನೀರಿನ ಅಭಾವ ಇರುವ ಕಡೆ ಟ್ಯಾಂಕರ್ ನೀರು ಯಾವಾಗ ಬರುತ್ತದೆ ಎಂದು ಕಾಯುವಂತಾಗಿದೆ. ಈಗಾಗಲೇ ಹಳೆಯ ಹನೀಪಾದ್‌ನಲ್ಲಿ ಕುಡಿಯುವ ನೀರಿನ ಅಭಾವಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಭರವಸೆ ನೀಡಿದ್ದಾರೆ. ಇದೇ ರೀತಿ ಬಿಸಿಲ ತಾಪಮಾನ ಜಾಸ್ತಿಯಾದರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ.
ತಹಶೀಲ್ದಾರ್ ವಿ.ಎನ್. ಬಾಡಕ್ಕರ್ ಸೇರಿದಂತೆ ತಾಲೂಕಿನ ಅಧಿಕಾರಿಗಳು ಈಗಾಗಲೆ ಕುಡಿಯುವ ನೀರಿನ ಆಭಾವವಿರುವ ಗ್ರಾಮಗಳನ್ನು ಗುರುತಿಸಿದ್ದು ಟ್ಯಾಂಕರ್ ಮೂಲಕ ಅಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.







