‘ಸುರಕ್ಷಿತ ನಗರ’ವೇ ಸ್ಮಾರ್ಟ್ ನಗರ: ಸುಭಾಷ್ ಚಂದ್ರ ಕುಂಟಿಯಾ
ಬೆಂಗಳೂರು, ಎ.17: ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದರೆ ಯಾವುದೇ ನಗರವನ್ನು ‘ಸ್ಮಾರ್ಟ್‌ಸಿಟಿ’ಯನ್ನಾಗಿ ಮಾಡಬಹುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ತಿಳಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಹನ್ಸ್ ಸೇಡೆಲ್ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸುರಕ್ಷಿತ ನಗರವೆ ಸ್ಮಾರ್ಟ್ ನಗರ’ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದರು.
ನಾವು ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಎಲ್ಲ ವಲಯಗಳಲ್ಲೂ ಪ್ರಯತ್ನಿಸಬೇಕು. ಸರಕಾರವು ಮಹಿಳಾ ಸುರಕ್ಷತೆಗಾಗಿ ‘ಸುರಕ್ಷಾ’ ಎಂಬ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಿದ್ದು, ಸಂಕಷ್ಟಕ್ಕೆ ಸಿಲುಕಿದ ಮಹಿಳೆ ಈ ಆ್ಯಪ್‌ನ ಬಟನ್ ಒತ್ತಿದೊಡನೆ ಗುಲಾಬಿ ಬಣ್ಣದ ಹೊಯ್ಸಳ ವಾಹನ ಆಕೆಯ ರಕ್ಷಣೆಗೆ 10 ನಿಮಿಷದೊಳಗೆ ಬರುತ್ತದೆ. ರಾಜ್ಯದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಇರುವ ಮಹಿಳಾ ಜನಸಂಖ್ಯೆಗೆ ಪೂರಕವಾಗಿ ಅವರಿಗೆ ರಕ್ಷಣೆ, ಸೌಕರ್ಯ ಒದಗಿಸಲು ಸರಕಾರ ಬದ್ಧವಾಗಿದೆ. ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ ಸಹಾಯದಿಂದ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳೆಯ ಸಬಲೀಕರಣ, ರಕ್ಷಣೆಗೆ ಕೈಗೊಳ್ಳಬೇಕಾದ ವರದಿಯನ್ನು ತಯಾರಿಸಿ ನೀಡಬೇಕೆಂದು ತಿಳಿಸಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಮಾತನಾಡಿ, ಆಯೋಗವು ಸಾರ್ವಜನಿಕರು, ಮಹಿಳೆಯರ ಹಕ್ಕುಗಳ ರಕ್ಷಣೆಗೆ ಹೋರಾಡುತ್ತಿದೆ. ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಹಾಗೂ ಎಲ್ಲರೂ ನ್ಯಾಯ ಒದಗಿಸುತ್ತದೆ. ಆಹಾರ ಸುರಕ್ಷತೆ, ವಸತಿ, ಶಿಕ್ಷಣದಿಂದ ಹಾಗೂ ರಾಜ್ಯದ ನೀತಿ ನಿರ್ದೇಶಕ ತತ್ವಗಳು ಮನುಷ್ಯನ ಜೀವನಮಟ್ಟವನ್ನು ಸುಧಾರಿಸುತ್ತಿದೆ. ಆದರೆ ಸಮಾಜದಲ್ಲಿ ವರದಕ್ಷಿಣೆ, ಜೀತಪದ್ಧತಿ, ಅತ್ಯಾಚಾರ, ಮಾನವ ಕಳ್ಳ ಸಾಗಾಣೆ ಅಸ್ತಿತ್ವದಲ್ಲಿದೆ. ಸರಕಾರವು ಮಹಿಳೆ, ಮಕ್ಕಳು, ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ಮಂಗಳಮುಖಿಯರ ಬಗೆಗೆ ಹೆಚ್ಚಿನ ಕಾಳಜಿ ಹಾಗೂ ಸೌಕರ್ಯ ನೀಡಬೇಕಾಗಿರುವುದು ಇಂದಿನ ಅಗತ್ಯ. ಇದಕ್ಕೆ ಯೋಜನೆಗಳನ್ನು ರೂಪಿಸಿ ಅದನ್ನು ಜಾರಿಗೊಳಿಸಬೇಕಿದೆ ಎಂದವರು ತಿಳಿಸಿದರು.
ಕರ್ನಾಟಕ ಹಾಗೂ ಕೇರಳದ ಜರ್ಮನ್ ಕನ್ಸೋಲ್ ಜನರಲ್ ಮಾರ್ಗಿಟ್ ಹೆಲ್ವಿಂಗ್ ಮಾತನಾಡಿ, ಇಂದಿನ ಮಹಿಳೆಯರ ಪ್ರತಿಷ್ಠಿತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳು ಇಂದೂ ವರದಿಗೊಳ್ಳುತ್ತಿವೆ. ಅವಳಿಗೆ ರಕ್ಷಣೆ ಒದಗಿಸುವುದು ಬಹುಮುಖ್ಯ. ಹೆಚ್ಚು ಮಹಿಳಾ ಠಾಣೆಗಳನ್ನು ತೆರೆಯಬೇಕಿದೆ. ಮಹಿಳೆಯರಿಗೆ ವಿದ್ಯಾಭ್ಯಾಸ, ಆತ್ಮಸ್ಥೆರ್ಯ ಒದಗಿಸಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿರುವಂತೆ ಸಮಾಜದ ಏಳ್ಗೆಯು ಮಹಿಳೆಯರ ಸಬಲೀಕರಣದ ಮೇಲೆ ನಿಂತಿದೆ. ಆಕೆ ಮುಂದುವರೆಯದಿದ್ದರೆ ಸಮಾಜವೂ ಮುಂದುವರೆಯುವುದಿಲ್ಲ ಎಂದಿದ್ದಾರೆ. ಆದುದರಿಂದ ಮಹಿಳೆಯರು ಶಕ್ತಿವಂತರಾಗಬೇಕೆಂದರು.
ಪೊಲೀಸ್ ಇಲಾಖೆ ಹೆಚ್ಚುವರಿ ಆಯುಕ್ತ ಎಸ್.ರವಿ ಮಾತನಾಡಿದರು.
ಆಹಾರ ಸುರಕ್ಷತೆ, ಶಾಲಾ ಮಕ್ಕಳ ಸುರಕ್ಷತೆ, ಬಾಲಕಾರ್ಮಿಕ ಪದ್ದತಿ, ಕಾನೂನಿನ ಅಡಿಯಲ್ಲಿ ನ್ಯಾಯ ಇತರ ವಿಷಯಗಳ ಕುರಿತು ವಿವಿಧ ಅಧಿಕಾರಿಗಳೂ, ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡನೆ ಮಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಆಯೋಗದ ಕಾರ್ಯದರ್ಶಿ ಮಧು ಶರ್ಮಾ ಉಪಸ್ಥಿತರಿದ್ದರು.







