ಉಡುಪಿ: ಎ.17 ರಿಂದ ನೀರಿನ ಸಂರಕ್ಷಣೆ ಕುರಿತು ಮಕ್ಕಳಿಂದ ರಾಜ್ಯ ಅಭಿಯಾನ
ಉಡುಪಿ, ಎ.17: ಜಮಾಅತೆ ಇಸ್ಲಾಮೀ ಹಿಂದ್ ಮಕ್ಕಳ ವಿಭಾಗ ‘ಗುಲ್ಶನ್’ ವತಿಯಿಂದ ಎ.17 ರಿಂದ ಎ.22 ವರೆಗೆ ಉಡುಪಿಯಲ್ಲಿ ನೀರು ಉಳಿಸಿ, ಭವಿಷ್ಯ ಸಂರಕ್ಷಿಸಿ ಎಂಬ ರಾಜ್ಯಮಟ್ಟದ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ರ್ಯಾಲಿ ಹಾಗೂ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ ಎಮದು ಝಿಯಾ ಮುಹಮ್ಮದ್ ಮರಕಡ ತಿಳಿಸಿದ್ದಾರೆ.
ಸೋಮವಾರ ಉಡುಪಿ ಪ್ರೆಸ್‌ಕ್ಲಬ್‌ನ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎ.17 ರಂದು ಉದ್ಘಾಟನೆಗೊಂಡ ಅಭಿಯಾನದಲ್ಲಿ ಮಕ್ಕಳಿಗೆ ಬೀಜ ನೀಡಿ ಸಸಿ ನೆಡುವಂತೆ ಪ್ರೋತ್ಸಾಹಿಸಿ, ಉತ್ತಮವಾಗಿ ಸಸಿ ಬೆಳೆಸಿದವರಿಗೆ ಪುರಸ್ಕಾರ ನೀಡಲಾಗುವುದು.
ಎ.19 ರಂದು ನೀರಿನ ಉಳಿತಾಯ, ಪ್ರಾಮುಖ್ಯತೆ ಹಾಗೂ ಮಳೆನೀರು ಕೊಯ್ಲಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಉಡುಪಿ ನಗರ, ಮಣಿಪಾಲ, ಕುಕ್ಕಿಕಟ್ಟೆ, ಆದಿ ಉಡುಪಿ, ಅಂಬಲಪಾಡಿ ಪ್ರದೇಶಗಳ ಮನೆಗೆ ಭೇಟಿ ನೀಡಲಿದ್ದಾರೆ ಎಂದರು.
ಎ.20 ರಂದು ಉಡುಪಿ ಜಾಮೀಯ ಮಸೀದಿಯಿಂದ ಕ್ಲಾಕ್ ಟವರ್‌ವರೆಗೆ ರ್ಯಾಲಿ ನಡೆಸಿ ಬಳಿಕ ಮಾನವ ಸರಪಳಿ ರಚಿಸಲಾಗುವುದು.ಎ.22 ರಂದು ಬೆಳಗ್ಗೆ 9ಕ್ಕೆ ಅಜ್ಜರಕಾಡು ಪುರಭವನದಲ್ಲಿ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಡೆಲ್ ತಯಾರಿ, ಕಿರುಚಲನಚಿತ್ರ ತಯಾರಿ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯ ವಿಜೇತರಿಗೆ ಬಹುಮಾನ ಪ್ರಶಸ್ತಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗುಲ್ಶನ್ ಸಂಘಟನೆಯ ನಿದಾ ಸಾದಿಕ್, ಮರಿಯಮ್ ಅಬ್ದುಲ್ ಅಝೀಝ್, ಆಯಿಷಾ ಮಕ್ಸೂದ್, ಸಮನ್ ಫಾರೂಕ್, ಶೇಖ್ ಶಿಫಾನ ಉಪಸ್ಥಿತರಿದ್ದರು.







