ದೇಶದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸದ ಕಂಪೆನಿಗಳು ಎಷ್ಟು ಗೊತ್ತೇ?
ಹೊಸದಿಲ್ಲಿ, ಎ.18: ದೇಶದ 11 ಲಕ್ಷ ಸಕ್ರಿಯ ಕಂಪೆನಿಗಳ ಪೈಕಿ ಸುಮಾರು ನಾಲ್ಕು ಲಕ್ಷ ಕಂಪೆನಿಗಳು ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿಲ್ಲ. ನಕಲಿ ಕಂಪೆನಿಗಳ ವಿರುದ್ಧದ ಕಾರ್ಯಾಚರಣೆ ಅಂಗವಾಗಿ ಇವುಗಳ ನೋಂದಣಿ ರದ್ದು ಮಾಡುವ ಬಗ್ಗೆ ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸಿದೆ.
ಕಳೆದ ತಿಂಗಳು ಆರಂಭವಾದ ಕಾರ್ಯಾಚರಣೆಯಡಿ ಈಗಾಗಲೇ ಕಂಪೆನಿಗಳ ರಿಜಿಸ್ಟ್ರಾರ್‌ನಲ್ಲಿ ನೋಂದಣಿಯಾಗಿರುವ ನಾಲ್ಕು ಲಕ್ಷ ಕಂಪೆನಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಕಂಪೆನಿಗಳು ರಿಟರ್ನ್ಸ್ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ವಿಫಲವಾದರೆ ಆ ಕಂಪೆನಿಗಳ ನೋಂದಣಿ ರದ್ದು ಮಾಡಲಾಗುವುದು. ಇದರಿಂದಾಗಿ ಇಂಥ ಕಂಪೆನಿಗಳು ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಅಂಥ ಕಂಪೆನಿಗಳ ಹೆಸರನ್ನೂ ಬಹಿರಂಗಪಡಿಸಲಿದೆ. ಆದಾಯ ತೆರಿಗೆ ಇಲಾಖೆ, ಬ್ಯಾಂಕ್ ಹಾಗೂ ಆರ್‌ಬಿಐ ಜತೆಗೂ ಈ ಮಾಹಿತಿ ಹಂಚಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದರೆ ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ಹಲವು ಕಂಪೆನಿಗಳು ರಿಟರ್ನ್ಸ್ ಸಲ್ಲಿಸಲು ಮುಂದಾಗಿಲ್ಲ ಎಂದು ಮೂಲಗಳು ಹೇಳಿವೆ. ಇವು ನಿಜವಾಗಿಯೂ ವಹಿವಾಟು ನಡೆಸುತ್ತವೆಯೇ ಅಥವಾ ಕಾಗದದಲ್ಲಷ್ಟೇ ಇವೆಯೇ ಎಂಬ ಬಗ್ಗೆ ಖಾತ್ರಿ ಇಲ್ಲ. ಅವುಗಳ ಸ್ಥಿತಿಗತಿ ಬಗ್ಗೆ ಮೊದಲು ತಿಳಿದುಕೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿವೆ.