ಉದ್ಯಮಿಯಾಗಲು ಬೇಕಂತೆ ನೀಳಕಾಯ, ಉತ್ತಮ ಬಣ್ಣ!
ಬಿಜೆಪಿ ಪ್ರಣಾಳಿಕೆ ಪಠ್ಯಪುಸ್ತಕದಲ್ಲಿ ಅಡಕ!

ಜೈಪುರ, ಎ.18: ರಾಜಸ್ಥಾನದ ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಶಾಲೆಗಳ ಪಠ್ಯ ಮತ್ತೆ ಬದಲಾಗಿವೆ. ಮೋದಿ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಮಾಜಿಕ ಪ್ರಸ್ತುತ ಯೋಜನೆಗಳೂ ಹೊಸ ಪಠ್ಯದಲ್ಲಿ ಸೇರಿವೆ. ಆದರೆ ಹಿಂದಿ ಪಠ್ಯ ಕೆಲ ಕುತೂಹಲಕರ ಅಂಶಗಳನ್ನು ಒಳಗೊಂಡಿದೆ. ಇದರ ಪ್ರಕಾರ ಉದ್ಯಮಶೀಲ ವ್ಯಕ್ತಿಯಾಗಲು ಅಪೇಕ್ಷಿತ ಗುಣಲಕ್ಷಣಗಳಲ್ಲಿ, ನೀಳ ಕಾಯ ಹಾಗೂ ಆಕರ್ಷಕ ಬಣ್ಣ ಇರಬೇಕಂತೆ!
ಮೋದಿ ಘೋಷಣೆಗಳು ಕೂಡಾ ಪಠ್ಯದಲ್ಲಿ ಸೇರಿದ್ದು, ಸ್ವಚ್ಛ ಭಾರತ ಪ್ರತಿಜ್ಞೆಯ ಪ್ರತಿಶಬ್ದವನ್ನೂ ಕಂಠಪಾಠ ಮಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಕಡ್ಡಾಯ.
12ನೇ ತರಗತಿ ಪಠ್ಯದ ಕೌಶಲ ಅಭಿವೃದ್ಧಿ ಎಂಬ ಅಧ್ಯಾಯದಲ್ಲಿ, ಉದ್ಯಮಿಯಾಗಲು ಇರಬೇಕಾದ ಅಪೇಕ್ಷಿತ ಭೌತಿಕ ಲಕ್ಷಣಗಳು ಎಂಬ ಶೀರ್ಷಿಕೆಯಡಿ, "ಉತ್ತಮ್ ಸ್ವಾಸ್ಥ್ಯ, ಪ್ರಭಾವಶಾಲಿ ವ್ಯಕ್ತಿತ್ವ, ಅಚ್ಚಿ ಉಂಚಯ್, ಸುಂದರ್ ರಂಗ್, ಶಲೀಂತಾ, ಗಂಭೀರತ್ವ" ಎಂದು ಪಟ್ಟಿ ಮಾಡಲಾಗಿದೆ.
ಒಂಬತ್ತರಿಂದ 12ನೇ ತರಗತಿವರೆಗಿನ ಪಠ್ಯದಲ್ಲಿ ಸಮಾಜೋಪಯೋಗಿ ಯೋಜನಾಯೆಂದು ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಹಾಗೂ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ರಾಜ್ಯ ಸರ್ಕಾರದ ಮುಖ್ಯಮಂತ್ರಿ ಜಲ ಸ್ವಾವಲಂಬನ ಯೋಜನಾ, ಭಮಶಾಹ್ ಯೋಜನೆ ಮೊದಲ್ಗೊಂಡಂತೆ ಹಲವು ಯೋಜನೆಗಳ ಬಗ್ಗೆ ತಲಾ ನಾಲ್ಕು ಅಧ್ಯಾಯಗಳಿವೆ. ರಾಜ್ಯ ಸರ್ಕಾರದ ಭಮಶಾಹ್ ಯೋಜನೆ ವಿತ್ತೀಯ ಸೇರ್ಪಡೆ ಯೋಜನೆಯಾಗಿದ್ದು, ಭಮಶಾಹ್ ರಜಪೂತ ರಾಜ ಮಹಾರಾಣಾ ಪ್ರತಾಪನಿಗೆ ಹಣಕಾಸು ನೆರವು ನೀಡಿದ್ದರಿಂದ ಮೊಘಲ್ ಪಡೆ ಸೋಲಿಸಲು ಸಾಧ್ಯವಾಯಿತು ಎಂದು ವಿವರಿಸಲಾಗಿದೆ.