ಕಾಂಗ್ರೆಸ್ ನಿಂದ ಶೀಘ್ರ ದೊಡ್ಡ ಬ್ರೇಕಿಂಗ್ ನ್ಯೂಸ್ !
ಮೂವರು ಪ್ರಬಲ ಪ್ರಾದೇಶಿಕ ನಾಯಕರು ಪಕ್ಷಕ್ಕೆ ವಾಪಸ್?

ಹೊಸದಿಲ್ಲಿ, ಎ.18: ಸದ್ಯದಲ್ಲೇ ಕಾಂಗ್ರೆಸ್ ಪಕ್ಷ ದೊಡ್ಡ ಬ್ರೇಕಿಂಗ್ ನ್ಯೂಸ್ ನೀಡಲಿದೆಯೇ? ಇಂತಹ ಒಂದು ಗುಸುಗುಸು ರಾಜಧಾನಿಯ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಕೇಳಿ ಬರಲಾರಂಭಿಸಿದೆ. ಕೆಲ ಮೂಲಗಳ ಪ್ರಕಾರ ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ತೊರೆದು ತಮ್ಮದೇ ಸ್ವಂತ ಪ್ರಾದೇಶಿಕ ಪಕ್ಷಗಳನ್ನು ರಚಿಸಿದ ನಾಯಕರನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತರುವ ಪ್ರಯತ್ನಗಳು ನಡೆಯಲಿವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅನಾರೋಗ್ಯದ ಕಾರಣ ಅವರ ಸ್ಥಾನಕ್ಕೆ ಇವರಲ್ಲಿ ಯಾರೊಬ್ಬರನ್ನಾದರೂ ನೇಮಿಸುವ ಸಾಧ್ಯತೆಗಳೂ ಇವೆಯೆನ್ನಲಾಗಿದೆ.
ಇತ್ತೀಚಿಗಿನ ದಿನಗಳಲ್ಲಿ ಬಿಜೆಪಿಯಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಅದೇ ಪಕ್ಷದ ಸಂಸದ ವರುಣ್ ಗಾಂಧಿಯನ್ನು ಕಾಂಗ್ರೆಸ್ ಗೆ ಕರೆತರುವ ಬಗ್ಗೆ ಯೋಚಿಸಲಾಗುತ್ತಿದ್ದು, ಅವರು ರಾಹುಲ್ ಗಾಂಧಿಯವರೊಂದಿಗಿರುವ ಉತ್ತಮ ಸಂಬಂಧವೂ ಇದಕ್ಕೆ ಪೂರಕವೆನ್ನಲಾಗಿದೆ.
ತರುವಾಯ ಹಿರಿಯ ಕಾಂಗ್ರೆಸ್ ನಾಯಕ ಕೆ.ವಿ.ಥಾಮಸ್ ಅವರು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಎನ್.ಸಿ.ಪಿ. ಅಧ್ಯಕ್ಷ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಕಾಂಗ್ರೆಸ್ ಸೇರಲು ಕರೆ ನೀಡಿದ್ದಾರೆ. ಒಂದೊಮ್ಮೆ ಅವರು ಕಾಂಗ್ರೆಸ್ ಪಕ್ಷ ಸೇರುವ ಮನಸ್ಸು ಮಾಡದೇ ಇದ್ದರೂ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಮಹಾ ಮೈತ್ರಿಗೆ ಜತೆಗೂಡಬಹುದೆನ್ನಲಾಗಿದೆ.
ವೈ.ಎಸ್.ಆರ್. ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಕೂಡ ಕಾಂಗ್ರೆಸ್ ಸೇರಿದರೆ ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿ ಎದುರಿಸಲು ಸಹಕಾರಿ ಎಂದು ಥಾಮಸ್ ಹೇಳಿದ್ದಾರೆ. ತಮ್ಮ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ಪತನವೊಂದರಲ್ಲಿ ಪ್ರಾಣ ಕಳೆದುಕೊಂಡಾಗ ಅವರ ಸ್ಥಾನ ತುಂಬಲು ತಮ್ಮನ್ನು ಮುಖ್ಯಮಂತ್ರಿ ಮಾಡಿಲ್ಲ ಎಂಬ ಸಿಟ್ಟಿನಿಂದ ಜಗನ್ ಮೋಹನ್ ರೆಡ್ಡಿ ತನ್ನದೇ ಸ್ವಂತ ಪಕ್ಷ ಸ್ಥಾಪಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.
ಮೂಲಗಳ ಪ್ರಕಾರ ಎಲ್ಲವೂ ಎಣಿಸಿದಂತೆ ನಡೆದರೆ ಸಾಕಷ್ಟು ಜನಪ್ರಿಯರಾಗಿರುವ ಪಶ್ಚಿಮ ಬಂಗಾಳ ಮುಖ್ಯಮಮತ್ರಿ ಮಮತಾ ಬ್ಯಾನರ್ಜಿ ಅವರನ್ನು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಕೇಳಿಕೊಳ್ಳುವ ಸಾಧ್ಯತೆಗಳೂ ಇವೆಯೆಂದು ಹೇಳಲಾಗಿದೆ.