ಆಹ್ವಾನ ನೀಡದೆ ನಿರ್ಲಕ್ಷ್ಯ: ಪಾಲೆಮಾರ್ ಆರೋಪ
ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ

ಮಂಗಳೂರು, ಎ.18: ಮಳವೂರು ಕಿಂಡಿ ಅಣೆಕಟ್ಟಿಗೆ ತಾನು ಸಚಿವನಾಗಿದ್ದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿ ಆಗಿರುವ ಯೋಜನೆ. ಹಾಗಿದ್ದರೂ ಇದೀಗ ಯೋಜನೆಯ ಉದ್ಘಾಟನೆಗೆ ತನ್ನನ್ನು ಆಹ್ವಾನಿಸದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆರೋಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಮುದ್ರಿಸಬೇಕಿತ್ತೆಂದು ನಾನು ಹೇಳುವುದಿಲ್ಲ. ಆದರೆ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಶಾಸಕ, ಮಾಜಿ ಸಚಿವ ಎಂಬ ನೆಲೆಯಲ್ಲಿ ನನಗೆ ಆಹ್ವಾನ ನೀಡಬೇಕಿತ್ತು ಎಂದರು.
ಮಳವೂರು ಕಿಂಡಿ ಅಣೆಕಟ್ಟಿನ ಕಾಮಗಾರಿಗೆ 2003ರಲ್ಲಿ ಮುನ್ನುಡಿ ಹಾಕಲಾಗಿತ್ತು. ಇದೀಗ ಪೂರ್ಣಗೊಂಡು ಸ್ಥಳೀಯ ಜನರಿಗೆ ನೀರಿನ ವ್ಯವಸ್ಥೆ ಆಗುತ್ತಿರುವುದು ಸಂತಸದ ವಿಚಾರ. ತಾನು ಸಚಿವ ಆಗಿದ್ದ ಕಾಲದಲ್ಲಿ ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆಯಡಿ ಈ ಮಳವೂರು ಡ್ಯಾಂ ನಿರ್ಮಾಣ ಆರಂಭಗೊಂಡಿತ್ತು. ಆಗ ಮೂರು ಕೋಟಿ ರೂ. ಬಿಡುಗಡೆ ಮಾಡಿದ್ದು, ಅದು ಸಾಕಾಗದೆ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ಕಾಮಗಾರಿಗೆ 18 ಕೋ.ರೂ.ಗಳ ಯೋಜನಾ ವರದಿ ಸಿದ್ಧಗೊಂಡಿತ್ತು. ಬಳಿಕ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗ ಈ ಯೋಜನೆಗೆ 31 ಕೋಟಿ ರೂ.ಗಳ ಯೋಜನೆ ರೂಪಿಸಲಾಯಿತು. ಆ ವೇಳೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕಾಮಗಾರಿಗೆ ಅನುಮೋದನೆ ನೀಡಿ 21 ಕೋಟಿ ರೂ. ಬಿಡುಗಡೆ ಮಾಡಿದ್ದರು. ಯೋಜನೆ ತಯಾರಿಸುವ ಸಂದರ್ಭ ಈ ಅಣೆಕಟ್ಟಿನಿಂದ ಕಂದಾವರ, ಅದ್ಯಪಾಡಿ, ಕೊಳಂಬೆ ಮತ್ತು ಗುರುಪುರ ಗ್ರಾಮಗಳಿಗೂ ನೀರು ನೀಡಲು ಷರತ್ತು ವಿಧಿಸಲಾಗಿತ್ತು. ಇದೀಗ ಆ ಗ್ರಾಮಗಳನ್ನು ಕೈಬಿಡಲಾಗಿದೆ ಎಂದು ಪಾಲೆಮಾರ್ ದೂರಿದರು.
ಕಾಂಗ್ರೆಸ್‌ನವರು ಈಗ ಆ ಯೋಜನೆಯನ್ನು ತಮ್ಮದೆಂದು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಅವರ ಅವಧಿಯಲ್ಲಿ ಕುಡಿಯುವ ನೀರಿನ ಬಗ್ಗೆ ಕಾಳಜಿಯೇ ವಹಿಸಿಲ್ಲ. ಮಂಗಳೂರು ನಗರ ಉತ್ತರದ ಮುಚ್ಚೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ 16 ಕೋಟಿ ರೂ. ಹಾಗೂ ನೀರುಮಾರ್ಗ- ಉಳಾಯಿಬೆಟ್ಟು ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 12 ಕೋಟಿ ರೂ.ಗಳ ಯೋಜನೆಯನ್ನು ಸರಕಾರಕ್ಕೆ ಕಳುಹಿಸಲಾಗಿದ್ದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಭರತ್ ಶೆಟ್ಟಿ, ಸಂಜಯ್ ಪ್ರಭು ಉಪಸ್ಥಿತರಿದ್ದರು.







