ಆದಿತ್ಯನಾಥ್ ಸಿಎಂ ಆದ ಬಳಿಕ ಯು.ಪಿ.ಯಲ್ಲಿ ಹೆಚ್ಚಾದ ಹಿಂದೂ ಯುವ ವಾಹಿನಿ ಸದಸ್ಯರ ಕಾರುಬಾರು

ಲಕ್ನೋ, ಎ.18: ಇತ್ತೀಚೆಗೆ ಒಂದು ಅಪರಾಹ್ನ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಮೀಪದ ಪಟ್ಟಣವೊಂದರಲ್ಲಿ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಕೇಸರಿ ಶಾಲುಗಳನ್ನು ಹೆಗಲಲ್ಲೇರಿಸಿಕೊಂಡು ಕೈಗಳಲ್ಲಿ ಕತ್ತಿ ಹಿಡಿದುಕೊಂಡು ಬೈಕಲ್ಲಿ ಡಜನುಗಟ್ಟಲೆ ಹಿಂದೂ ಯುವಕರು ಅಡ್ಡಾಡುತ್ತಿದ್ದರು. ಈ ಯುವಕರೇ ಮಾಹಿತಿದಾರರಾಗಿ ಪೊಲೀಸರಿಗೆ ಸಾವಿರಾರು ಮುಸ್ಲಿಮರಿಂದ ನಡೆಸಲ್ಪಡುವ ಮಾಂಸದಂಗಡಿಗಳನ್ನು ಗುರುತಿಸಲು ಸಹಾಯ ಮಾಡಿದ್ದರೆಂದು ಮೂಲಗಳು ತಿಳಿಸಿವೆ ಎಂದು 'ದಿ ಹಫ್ಫಿಂಗ್ಟನ್ ಪೋಸ್ಟ್' ವರದಿಯೊಂದು ಹೇಳಿದೆ. ಇಂದು ಆ ಮಾಂಸದಂಗಡಿಗಳು ಮುಚ್ಚಿವೆ. ಮುಸ್ಲಿಂ ಯುವಕರು ರಸ್ತೆಗಳಲ್ಲಿ ಹಿಂದೂ ಹುಡುಗಿಯರ ಜತೆ ಮಾತನಾಡುವುದನ್ನು ತಡೆಯುವಂತೆ ಅವರೀಗ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರಿಂದ ಸ್ಥಾಪಿತ ಹಿಂದೂ ಯುವ ವಾಹಿನಿ ಇದೀಗ ಮತ್ತಷ್ಟು ಧೈರ್ಯ ಪಡೆದುಕೊಂಡಿದೆ ಹಾಗೂ ತನ್ನ ಕಾರ್ಯ ಸಾಧಿಸಲು ಪೊಲೀಸರ ಮೇಲೆ ಒತ್ತಡ ಹೇರುತ್ತಿದೆಯೆನ್ನಲಾಗಿದೆ.
‘‘24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ನಾವು 45,000 ಸಣ್ಣ ಮಾಂಸದಂಗಡಿಗಳನ್ನು ಪೊಲೀಸರು ಮುಚ್ಚುವಂತೆ ಮಾಡಿದೆವು. ನಮ್ಮ ಮಾಹಿತಿದಾರರಿಲ್ಲದೇ ಇದ್ದಿದ್ದರೆ ಅವರು ಈ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿರಲಿಲ್ಲ’’ ಎಂದು ಹಿಂದೂ ಯುವ ವಾಹಿನಿಯ ಹಿರಿಯ ನಾಯಕ ಪಂಕಜ್ ಸಿಂಗ್ ಹೇಳುತ್ತಾರೆ.
ಆದರೆ ಈ ಯುವ ವಾಹಿನಿ ಸಂಘಟನೆ ಕಾನೂನನ್ನು ಉಲ್ಲಂಘಿಸುವ ಸಾಧ್ಯತೆಯನ್ನು ಹೆಚ್ಚುವರಿ ಡಿಐಜಿ ದಲ್ಜಿತ್ ಸಿಂಗ್ ಚೌಧುರಿ ನಿರಾಕರಿಸುತ್ತಾರೆ. ‘‘ಯಾರೇ ಆದರೂ ಕಾನೂನು ಕೈಗೆತ್ತಿಕೊಂಡಲ್ಲಿ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಅದೇ ಸಮಯ ಯಾವುದೇ ಸಂಘಟನೆ ನಮಗೆ ಮಾಹಿತಿ ನೀಡಲು ಸ್ವತಂತ್ರ. ಹಿಂದೂ ಯುವ ವಾಹಿನಿ ವಿರುದ್ಧ ಇತ್ತೀಚೆಗೆ ಯಾವುದೇ ದೂರು ನಮಗೆ ದೊರೆತಿಲ್ಲ. ಆದುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಕಾರಣವಿಲ್ಲ’’ ಎಂದು ಅವರು ಹೇಳುತ್ತಾರೆ.
ಮುಖ್ಯಮಂತ್ರಿ ಆದಿತ್ಯನಾಥ್ ಸ್ಥಾಪಿಸಿರುವ ರೋಮಿಯೋ ನಿಗ್ರಹ ಪಡೆಗೂ ಯುವ ವಾಹಿನಿ ಸದಸ್ಯರು ಮಾಹಿತಿ ನೀಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಹಿಂದು ಯುವತಿಯರೊಂದಿಗೆ ಮಾತನಾಡುವ ಮುಸ್ಲಿಂ ಪುರುಷರನ್ನು ಗುರಿಯಾಗಿಸುವಂತೆ ಪೊಲೀಸರ ಮೇಲೆ ವಾಹಿನಿ ಸದಸ್ಯರು ಒತ್ತಡ ಹೇರಿದ ನಿದರ್ಶನಗಳಿವೆ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಯುವವಾಹಿನಿ ನಾಯಕರು ಈ ಆರೋಪವನ್ನು ನಿರಾಕರಿಸುತ್ತಾರೆ.







