ಎ.24, 25: ಯೆನೆಪೊಯ ತಾಂತ್ರಿಕ ವಿದ್ಯಾಲಯದಲ್ಲಿ ಕಬಡ್ಡಿ ಪಂದ್ಯಾಟ
ಮೂಡುಬಿದಿರೆ, ಎ.18 : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಯೆನೆಪೊಯ ತಾಂತ್ರಿಕ ವಿದ್ಯಾಲಯ ತೋಡಾರು ಜಂಟಿ ಸಹಭಾಗಿತ್ವದಲ್ಲಿ ಎ.24 ಹಾಗೂ 25ರಂದು ಯೆನೆಪೊಯ ಕ್ರೀಡಾಂಗಣದಲ್ಲಿ ಮಂಗಳೂರು ವಲಯ ಮಟ್ಟದ ತಾಂತ್ರಿಕ ಮಹಾವಿದ್ಯಾಲಯಗಳ ಪುರುಷರ ಕಬಡ್ಡಿ ಪಂದ್ಯಾಟವು ನಡೆಯಲಿದೆ ಎಂದು ಯೆನೆಪೊಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಆರ್.ಜಿ. ಡಿಸೋಜ ತಿಳಿಸಿದರು.
ಕಾಲೇಜಿನ ಅವರ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂದ್ಯಕೂಟದಲ್ಲಿ ಮಂಗಳೂರು ವಲಯದ ಒಟ್ಟು 16 ತಾಂತ್ರಿಕ ಮಹಾವಿದ್ಯಾಲಯಗಳ ಪುರುಷರ ತಂಡಗಳು ಭಾಗವಹಿಸಲಿವೆ. ಸುಮಾರು 200 ಕ್ಕಿಂತ ಹೆಚ್ಚಿನ ಕ್ರೀಡಾಳುಗಳು, 50 ಕ್ಕಿಂತ ಹೆಚ್ಚು ಅಧಿಕಾರಿಗಳು ಹಾಗೂ 15 ಮಂದಿ ತೀರ್ಪುಗಾರರು ಈ ಕ್ರೀಡಾಕೂಟಕ್ಕಾಗಿ ಆಗಮಿಸಲಿದ್ದಾರೆ.
ಭಾಗವಹಿಸುವ ತಂಡಗಳಿಗೆ ವಸತಿ, ಊಟೋಪಚಾರ ಹಾಗೂ ವಾಹನದ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಇದರ ಜೊತೆಗೆ ಹೊರಗಿನ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಳುಗಳಿಗಾಗಿ ರೈಲ್ವೇ ನಿಲ್ದಾಣದಿಂದಲೇ ಕ್ಯಾಂಪಸ್‌ವರೆಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜೇತ ತಂಡಕ್ಕೆ ಚಾಂಪಿಯನ್‌ಶಿಪ್ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನಗಳಿರುತ್ತವೆ ಎಂದು ಮಾಹಿತಿ ನೀಡಿದರು.
ಯೆನೆಪೊಯ ಕ್ಯಾಂಪಸ್‌ನಲ್ಲಿ ಎರಡು ಕ್ರೀಡಾಂಗಣಗಳಲ್ಲಿ ಏಕಕಾಲಕ್ಕೆ ಪಂದ್ಯಾಟಗಳು ನಡೆಯಲಿದ್ದು, ಈ ಕ್ರೀಡಾಕೂಟದ ಪ್ರಥಮ ಹಾಗೂ ದ್ವಿತೀಯ ಸ್ಥಾನಿ ತಂಡಗಳು ಎ.27 ಹಾಗೂ 28ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಅಂತರ್‌ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಂಗಳೂರು ವಲಯವನ್ನು ಪ್ರತಿನಿಧಿಸಲು ಅರ್ಹರಾಗುತ್ತಾರೆ ಎಂದವರು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ದೈಹಿಕ ನಿರ್ದೇಶಕ ಲೋಕೇಶ್, ಉಪನ್ಯಾಸಕರಾದ ಸುಜಯ್, ಕಿರಣ್ ಸುದ್ದಿಗೋಷ್ಠಿಯಲ್ಲಿದ್ದರು.







