ಹಾಲು-ಗ್ಯಾಸ್‌ಗೆ ಹೆಚ್ಚಿನ ದರ ವಸೂಲಿ : ಸೂಕ್ತ ಕ್ರಮ ಕೈಗೊಳ್ಳಲು ಮನವಿ
ಶಿವಮೊಗ್ಗ, ಎ.18: ನಂದಿನಿ ಹಾಲು ಹಾಗೂ ಗ್ಯಾಸ್ ಸಿಲಿಂಡರ್‌ಗೆ ನಿಗದಿ ಮಾಡಿರುವ ಬೆಲೆಗಿಂತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. 10 ರೂ. ನಾಣ್ಯ ಚಲಾವಣೆಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆ ಆಗ್ರಹಿಸಿದೆ.
ಮಂಗಳವಾರ ನಗರದ ಡಿಸಿ ಕಚೇರಿಯಲ್ಲಿ ವೇದಿಕೆಯ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು. ನಂದಿನಿ ಪಾರ್ಲರ್‌ಗಳಲ್ಲಿ ಹಾಲಿನ ಪ್ಯಾಕೆಟ್‌ಗಳಿಗೆ ಕೆಎಂಎಫ್ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತ ವಸೂಲಿ ಮಾಡಲಾಗುತ್ತಿದೆ. ಗ್ಯಾಸ್ ಏಜೆನ್ಸಿಗಳು ರೀಫಿಲ್ ಗ್ಯಾಸ್ ಸಿಲಿಂಡರ್‌ಗಳಿಗೆ ನಿಗದಿಗಿಂತ ಹೆಚ್ಚಿನ ದರ ಸಂಗ್ರಹಿಸುತ್ತಿವೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಎಂದು ವೇದಿಕೆ ಆರೋಪಿಸಿದೆ.
10 ರೂ. ನಾಣ್ಯ ಚಲಾವಣೆಯ ಮೇಲೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಹೊಸೂರು ಪ್ರದೇಶ ಮಾಲಿನ್ಯ ನಿಷೇಧಿತವಾಗಿದ್ದರೂ ಸಹ ಹಿಟಾಚಿ, ಬಂಡೆ ಒಡೆಯುವ ಉಪಕರಣಗಳನ್ನು ಬಳಸಿ ಅರಣ್ಯ ನಾಶ ಮಾಡಲಾಗುತ್ತಿದೆ. ಇದರಿಂದ ಸೂಕ್ಷ್ಮ ಪರಿಸರ ನಾಶವಾಗಲಿದೆ ಎಂದು ವೇದಿಕೆ ತಿಳಿಸಿದೆ.ಈ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚೆ ನಡೆಸಿ, ಪರಿಹಾರ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.





