ಎ.22 ರಂದು ಸಹ್ಯಾದ್ರಿ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮ
ಶಿವಮೊಗ್ಗ,ಎ.18: ಸಹ್ಯಾದ್ರಿ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮವು ಎ. 22 ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಕುವೆಂಪು ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ಜೋಗನ್ ಶಂಕರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೃತ ಮಹೋತ್ಸವು ಬೆಳಗ್ಗೆ 10.30 ಕ್ಕೆ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವ ಬಸರಾಜ ರಾಯರೆಡ್ಡಿ ವಹಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ, ಗೃಹ ಸಚಿವ ಪರಮೇಶ್ವರ್ ಭಾಗವಹಿಸಲಿದ್ದಾರೆ ಎಂದರು.
ಅಂದು ಬೆಳಗ್ಗೆ 9ಕ್ಕೆ ಸುಗಮ ಸಂಗೀತ ಹಾಗೂ ಜನಪದ ಗೋಷ್ಠಿಯ ನಡೆಯಲಿದೆ. ಸಂಜೆ 5ಕ್ಕೆ ಕರ್ನಾಟಕದ ಜನಪಪದ ಕಲಾತಂಡಗಳ ವಿವಿಧ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.
1941 ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಇಂಟರ್‌ಮೀಡಿಯೆಟ್ ಕಾಲೇಜಾಗಿ ಸ್ಥಾಪನೆಗೊಂಡು 1956ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಗಿ ಉನ್ನತೀಕರಣಗೊಂಡಿದೆ.ರಾಷ್ಟ್ರಕವಿ ಕುವೆಂಪು ಈ ಕಾಲೇಜಿಗೆ ಸಹ್ಯಾದ್ರಿ ಕಾಲೇಜು ಎಂದು ಮರು ನಾಮಕರಣ ಮಾಡಿದ್ದಾರೆ ಎಂದು ವಿವರಿಸಿದರು. ಸಹ್ಯಾದ್ರಿ ಕಾಲೇಜು ಪ್ರಸ್ತುತ 75ನೆಯ ವರ್ಷ ಪೂರೈಸಿದೆ. ಈ ಪ್ರಯುಕ್ತ ಅಮೃತ ಮಹೋತ್ಸವ ಆಚರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕುವೆಂಪು ವಿವಿ ಕುಲಸಚಿವ ಪ್ರೊ. ಬೋಜ್ಯಾ ನಾಯ್ಕ, ಸಹ್ಯಾದ್ರಿ ಕಲಾ ಕಾಲೇಜು ಪ್ರಚಾರ್ಯ ಪ್ರೊ. ಗೌಡರ ಶಿವಣ್ಣನವರ್, ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಶಕುಂತಲ, ಸುವರ್ಣ ಮಹೋತ್ಸವ ಸಮಿತಿ ಸಂಚಾಲಕರಾದ ಪ್ರೊ. ಸದಾನಂದ ಹೆಗ್ಡೆ, ಪ್ರೊ. ರಾಜೇಶ್ವರಿ ಉಪಸ್ಥಿತರಿದ್ದರು.







