ಪತ್ರಕರ್ತರ ವಿರುದ್ಧವೇ ಹರಿಹಾಯ್ದ ಮುತಾಲಿಕ್ ಬೆಂಬಲಿಗರು
ಬೆಂಗಳೂರು, ಎ.18: ಆಝಾನ್ ಬಗ್ಗೆ ಸೋನು ನಿಗಮ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಲ್ಲಿ, "ಬೆಳಗ್ಗೆ 4 ಗಂಟೆಗೆ ಧ್ವನಿವರ್ಧಕಗಳ ಮೂಲಕ ದೇವಸ್ಥಾನಗಳಲ್ಲಿ ಸುಪ್ರಭಾತ ಮಾಡುವುದನ್ನು ಏಕೆ ಪ್ರಶ್ನಿಸುವುದಿಲ್ಲ" ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಮುತಾಲಿಕ್ ಬೆಂಬಲಿಗರು ಪತ್ರಕರ್ತರ ವಿರುದ್ಧವೇ ಹರಿಹಾಯ್ದ ಘಟನೆ ನಡೆದಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುತಾಲಿಕ್ ಆಝಾನ್ ಕುರಿತಂತೆ ಸೋನು ನಿಗಮ್ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಈ ಸಂದರ್ಭ "ಬೆಳಗ್ಗೆ 4 ಗಂಟೆಗೆ ಧ್ವನಿವರ್ಧಕಗಳ ಮೂಲಕ ಸುಪ್ರಭಾತಗಳನ್ನು ಹಾಡುವುದರ ಬಗ್ಗೆ ನೀವೇಕೆ ಪ್ರಶ್ನಿಸುವುದಿಲ್ಲ" ಎಂದು ಪತ್ರಕರ್ತರು ಪ್ರಶ್ನಿಸಿದರು. ಈ ಸಂದರ್ಭ ಮುತಾಲಿಕ್ ಬೆಂಬಲಿಗರು ಎದ್ದುನಿಂತು, ಏರುಧ್ವನಿಯಲ್ಲಿ, "ನೀವೇನು ಪಾಕಿಸ್ತಾನದಲ್ಲಿದ್ದೀರಾ. ಇದು ಹಿಂದೂ ರಾಷ್ಟ್ರ, ಸುಪ್ರಭಾತ ಹಾಕಬಹುದು. ಆದರೆ, ಮಸೀದಿಯಲ್ಲಿ ಪ್ರಾರ್ಥನೆ ಮಾಡಬಾರದು" ಎಂದು ಗದರಿಸಿದರು.
ಗೋಮಾಂಸ ರಫ್ತು ತಡೆಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ: ಭಾರತದಿಂದ ವಿದೇಶಕ್ಕೆ ಅಕ್ರಮವಾಗಿ ಗೋ ಮಾಂಸ ರಫ್ತು ಮಾಡುತ್ತಿರುವದನ್ನು ತಡೆಯಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ದೇಶದಲ್ಲಿ ದಿನದಿಂದ ದಿನಕ್ಕೆ ಗೋವುಗಳ ಮಾರಣಹೋಮ ಹೆಚ್ಚಾಗುತ್ತಿದ್ದು, ಪ್ರತಿದಿನ ಟನ್‌ಗಟ್ಟಲೇ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಹೀಗಾಗಿ ಕೂಡಲೇ ಪ್ರಧಾನಿ ನರೇಂದ್ರಮೋದಿ ಗೋ ಮಾಂಸವನ್ನು ರಫ್ತು ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರೈತರು ಹಾಗೂ ಜಾನುವಾರುಗಳು ಬದುಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೂಡಲೇ ಸರಕಾರ ಹೋಬಳಿಗೊಂದು ಗೋಶಾಲೆ ಆರಂಭಿಸಬೇಕು. ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.