ಹಿಂದೂ-ಮುಸ್ಲಿಮರ ಭಾವನೆಗಳನ್ನು ಕೆರಳಿಸಿ ದೇಶವನ್ನು ಒಡೆದು ಆಳುತ್ತಿರುವ ಪ್ರಧಾನಿ ಮೋದಿ: ದಿಗ್ವಿಜಯ್ ಸಿಂಗ್
ಹುಬ್ಬಳ್ಳಿ, ಎ.18: ಪ್ರಧಾನಿ ನರೇಂದ್ರಮೋದಿಯವರು ಹಿಂದೂ ಹಾಗೂ ಮುಸ್ಲಿಮರ ಭಾವನೆಗಳನ್ನು ಕೆರಳಿಸಿ ದೇಶವನ್ನು ಒಡೆದು ಆಳುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಿಡಿಕಾರಿದ್ದಾರೆ.
ಮಂಗಳವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಗ್ಧ ಜನರಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ದೇಶದಲ್ಲಿ ದಂಗೆಗಳನ್ನು ಮಾಡಿಸುತ್ತಿದ್ದಾರೆ. ಓಡಿಸ್ಸಾದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಮರ ಬಗ್ಗೆ ಪ್ರಧಾನಿ ಅನುಕಂಪದ ಮಾತುಗಳನ್ನಾಡಿದ್ದಾರೆ ಎಂದು ಟೀಕಿಸಿದರು.
ನೋಟುಗಳ ರದ್ದತಿಯಿಂದ ಕಪ್ಪು ಹಣ ಹಿಂದಕ್ಕೆ ಬಂದಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಆಗಿಲ್ಲ. ಭಯೋತ್ಪಾದಕ ಚಟುವಟಿಕೆಗಳು ಸ್ಥಗಿತವಾಗಿಲ್ಲ. ನಕಲಿ ನೋಟುಗಳ ಚಲಾವಣೆಯೂ ನಿಂತಿಲ್ಲ. ನರೇಂದ್ರಮೋದಿ ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಲು ಇತರೆ ವಿಷಯಗಳತ್ತ ಜನರ ಗಮನ ಕೇಂದ್ರೀಕರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದಿಗ್ವಿಜಯ್‌ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
ನಾವು ಸಂಘಪರಿವಾರದ ವಿರೋಧಿಗಳಿರಬಹುದು. ಆದರೆ, ಹಿಂದೂ ವಿರೋಧಿಗಳಲ್ಲ. ನಮಗೆ ಎಲ್ಲರೂ ಮುಖ್ಯ. ಇಡೀ ವ್ಯವಸ್ಥೆ ಒಂದಾಗಿ ಹೋಗುವುದು ಮುಖ್ಯ. ಆದರೆ, ಆರೆಸೆಸ್ಸ್ ಹಿಂದೂ, ಹಿಂದೂಯೇತರ ಎಂದು ಜನರಲ್ಲಿ ಒಡಕು ಉಂಟು ಮಾಡುವ ಕೆಲಸ ಮಾಡುತ್ತಿದೆ. ಅದನ್ನು ನಾವು ವಿರೋಧಿಸುತ್ತೇವೆಯೇ ವಿನಃ ಹಿಂದೂಗಳನ್ನಲ್ಲ ಎಂದು ಅವರು ಹೇಳಿದರು.
ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಆಡಳಿತದ ಎಲ್ಲ ಸ್ತರಗಳಲ್ಲಿ ವಿಫಲವಾಗಿದೆ. ಇದೇ ಮೋದಿಯವರು, ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಗಳನ್ನು ಜಮೆ ಮಾಡುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಈ ಕೆಲಸ ಮಾಡಿಲ್ಲ. ಎಲ್ಲ ಕಡೆಯೂ ಮೋದಿ ಸರಕಾರ ಎಡವುತ್ತಿದೆ. ಇದನ್ನು ಮುಚ್ಚಿ ಹಾಕಿಕೊಳ್ಳಲು ಬೇರೆ ಬೇರೆ ನಾಟಕಗಳನ್ನು ಆಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಜಮ್ಮು ಕಾಶ್ಮೀರದಲ್ಲಿ ಪಿಡಿಪಿ, ಬಿಜೆಪಿಯದ್ದು ಅನೈತಿಕ ಸಂಬಂಧ. ಎರಡೂ ಪಕ್ಷಗಳ ನಡುವೆ ಪರಸ್ಪರ ಹೊಂದಾಣಿಕೆಯೇ ಇಲ್ಲ. ಹೀಗಾಗಿ ನಿರಂತರ ದಂಗೆಗಳು ನಡೆದು ಅಮಾಯಕರು ಸಾಯುತ್ತಿದ್ದಾರೆ ಎಂದು ದಿಗ್ವಿಜಯ್‌ಸಿಂಗ್ ಹೇಳಿದರು.
ಇವಿಎಂ ಮೇಲೆ ನಂಬಿಕೆಯಿಲ್ಲ
ಎಲೆಕ್ಟ್ರಾನಿಕ್ ಮತದಾನ ಯಂತ್ರದ ಮೇಲೆ ತನಗೆ ನಂಬಿಕೆಯಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ದಿಗ್ವಿಜಯ್‌ಸಿಂಗ್ ಉತ್ತರಿಸಿದರು