ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ವಿಡಿಯೋ ಸಂವಾದ: ಬರ ನಿರ್ವಹಣೆಗೆ ಸೂಚನೆ

ಬೆಂಗಳೂರು, ಎ.18: ಹಿಂದೆಂದೂ ಕಾಣದಂತಹ ಭೀಕರ ಬರಗಾಲ ರಾಜ್ಯವನ್ನು ಆವರಿಸಿದೆ. ಬರಗಾಲದ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಮತ್ತು ಕೈಗೊಂಡಿರುವ ಪರಿಹಾರ ಕಾಮಗಾರಿಗಳ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರೊಂದಿಗೆ ಚರ್ಚಿಸಿದರು.
ಭೀಕರ ಬರಗಾಲ ರಾಜ್ಯವನ್ನು ಆವರಿಸಿದೆ. ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವ ಅಗತ್ಯವಿದೆ. ಹೀಗಾಗಿ ಜೂನ್‌ವರೆಗೂ ಕುಡಿಯುವ ನೀರು ಪೂರೈಸುವ, ಕೂಲಿ ಕಾರ್ಮಿಕರಿಗೆ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವುದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜವಾಬ್ದಾರಿ ಎಂದು ಸಿಎಂ ಸೂಚಿಸಿದರು.
ಸರಕಾರ ಬಿಡುಗಡೆ ಮಾಡುವ ಇನ್‌ಪುಟ್ ಸಬ್ಸಿಡಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಬೇಕು. ಈ ತಿಂಗಳ ಅಂತ್ಯದ ವೇಳೆಗೆ ಎಲ್ಲ ರೈತರಿಗೂ ಹಣ ಸೇರಬೇಕು. ರಾಜ್ಯದ ಯಾವ ಭಾಗದಲ್ಲಿ ನೀರಿನ ಸಮಸ್ಯೆ ಕಂಡು ಬಂದರೂ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸಿಎಂ ಸೂಚಿಸಿದರು.
ಖಾಸಗಿ ಕೊಳವೆ ಬಾವಿಗಳ ವಶಕ್ಕೆ ಸೂಚನೆ: ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಸ್ಥಳಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ವಶಪಡಿಸಿಕೊಂಡು ನೀರು ಪೂರೈಸಬೇಕು. ಸರಕಾರ ನಿಗದಿ ಮಾಡಿರುವ ಹಣವನ್ನು ನೀಡಿ ವಶಪಡಿಸಿಕೊಳ್ಳಬೇಕು. ಆದರೆ ಕೊಳವೆ ಬಾವಿಗಳ ಮಾಲಕರನ್ನು ಹೆದರಿಸಬೇಡಿ. ಒಟ್ಟಿನಲ್ಲಿ ಕುಡಿಯುವ ನೀರಿಗೆ ಅಗತ್ಯ ಅನುದಾನ ಒದಗಿಸಲು ಸರಕಾರ ಸಿದ್ಧವಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಸಹಾಯವಾಣಿ, ಜನಪ್ರತಿನಿಧಿಗಳು ಅಥವಾ ಮಾಧ್ಯಮಗಳ ಮೂಲಕ ದೂರು ಬಂದ ತಕ್ಷಣ ಕ್ರಮ ಕೈಗೊಳ್ಳಬೇಕು. ಮುಂದಿನ ಹತ್ತು ವಾರಗಳಿಗೆ ಆಗುವಷ್ಟು ಮೇವನ್ನು ಈಗಲೇ ಸಂಗ್ರಹಿಸಬೇಕು. ಜಾನುವಾರುಗಳಿಗೆ ನೀರು ಒದಗಿಸಲು ಪ್ರತಿ ಹಳ್ಳಿಗಳಲ್ಲೂ ತೊಟ್ಟಿಗಳನ್ನು ನಿರ್ಮಾಣ ಮಾಡಬೇಕು. ಅಗತ್ಯ ಇರುವ ಕಡೆಗಳಲ್ಲಿ ಗೋಶಾಲೆಗಳನ್ನು ತೆರೆಯಬೇಕು. ರಾಸುಗಳಿಗೆ ನೀರು, ನೆರಳು ಒದಗಿಸಬೇಕು. ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಜಾನುವಾರುಗಳ ಜೊತೆ ಬಂದವರಿಗೆ ತಂಗಲು ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಸಬ್ಸಿಡಿ ಬಿಡುಗಡೆ: ವಿಡಿಯೋ ಸಂವಾದ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್‌ಪುಟ್ ಸಬ್ಸಿಡಿಯಾಗಿ 265 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರು. ಸಬ್ಸಿಡಿ ಹಣ ರೈತರ ಬ್ಯಾಂಕ್‌ಖಾತೆಗೆ ನೇರವಾಗಿ ಜಮೆ ಮಾಡುವ ಆನ್‌ಲೈನ್ ಪ್ರಕ್ರಿಯೆಗೂ ಚಾಲನೆ ನೀಡಿದರು.
ರಾಜ್ಯದ 4.47 ಲಕ್ಷ ರೈತರ ಬ್ಯಾಂಕ್‌ಖಾತೆಗೆ ಈ ಹಣ ಜಮೆಯಾಗಲಿದೆ. ಈ ಹಿಂದೆ 12.03 ಲಕ್ಷ ರೈತರಿಗೆ 671 ಕೋಟಿ ರೂ.ಗಳ ಇನ್‌ಪುಟ್ ಸಬ್ಸಿಡಿ ಬಿಡುಗಡೆಯಾಗಿತ್ತು. ಈ ವರೆಗೆ 16 ಲಕ್ಷಕ್ಕೂ ಹೆಚ್ಚು ರೈತರಿಗೆ 936 ಕೋಟಿ ರೂ.ಗಳ ಸಬ್ಸಿಡಿ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಂವಾದದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕೃಷಿ ಸಚಿವ ಬೈರೇಗೌಡ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್ ಮತ್ತು ಪಶು ಸಂಗೋಪನಾ ಸಚಿವ ಎ. ಮಂಜು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಸೇರಿದಂತೆ ಇತರರು ಭಾಗವಹಿಸಿದ್ದರು.







