ಮಂದಿರ-ಮಸೀದಿ-ಚರ್ಚ್ ಗಳನ್ನು ಕಟ್ಟುವುದರ ಬದಲು ಮನಸ್ಸುಗಳನ್ನು ಕಟ್ಟಿ: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ದಾವಣಗೆರೆ, ಎ.18: ಇಲ್ಲಿಯವರೆಗೆ ಕೇವಲ ಮನೆ, ಮಠ, ಮಸೀದಿ, ಚರ್ಚ್, ಮಂದಿರಗಳನ್ನೇ ಕಟ್ಟಿದ್ದೇವೆ. ಇನ್ನಾದರೂ ಗುಡಿ-ಗುಂಡಾರ ಕಟ್ಟುವ ಕೆಲಸ ನಿಲ್ಲಿಸಿ, ಮನಸ್ಸು ಕಟ್ಟುವ ಕಾಯಕ ರೂಢಿಸಿಕೊಳ್ಳಿ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ನಗರದ ಗಾಂಧಿ ನಗರದ 5ನೇ ತಿರುವಿನ ಶ್ರೀ ಹೊರಟ್ಟಿ ದುರ್ಗಾಂಬಿಕಾ ದೇವಸ್ಥಾನ ಕಮಿಟಿಯಿಂದ ಮಂಗಳವಾರ ಏರ್ಪಡಿಸಿದ್ದ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಹೊರಟ್ಟಿ ದುರ್ಗಾಂಬಿಕಾ, ಶ್ರೀ ಮರಿಯಮ್ಮ, ಶ್ರೀ ಗಣೇಶ ಮತ್ತು ಶ್ರೀ ಭೈರೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ವನದ 2ನೇ ಅಂತಸ್ತಿನಲ್ಲಿ ನಿರ್ಮಾಣವಾಗಿರುವ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವ ಸಮಾಜ ಜಾಗೃತಿ ಹಾಗೂ ಶಿಕ್ಷಣದ ಕಡೆಗೆ ಮುಖ ಮಾಡಿದೆಯೋ ಆ ಸಮಾಜ ಅಭಿವೃದ್ಧಿಯಾಗಿರುವುದನ್ನು ನೀವು ಗಮನಿಸಿದ್ದೀರಿ. ಈ ನಿಟ್ಟಿನಲ್ಲಿ ಮಾದಿಗ ಸಮಾಜ ಬಾಂಧವರು ಶಿಕ್ಷಣಕ್ಕೆ ಒತ್ತು ನೀಡಿ, ಉನ್ನತ ಮಟ್ಟಕ್ಕೆ ಏರಿದರೆ, ಯಾರಿಗೂ ಜಾತಿ ಸೋಂಕು ತಗಲುವುದಿಲ್ಲ. ಆದ್ದರಿಂದ ಜಾತಿಯಲ್ಲಿ ಹಿಂದುಳಿದಿದ್ದೇವೆ ಎಂಬ ಭಾವನೆ ಬಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಕರೆ ನೀಡಿದ ಅವರು, ದೇವಸ್ಥಾನಗಳ ನಿರ್ಮಾಣದಿಂದ ಮಳೆ, ಬೆಳೆ ಆಗೋಲ್ಲ. ಮರಗಳಿಗೆ ಮಾತ್ರ ಮಳೆ ತರುವ ಶಕ್ತಿ ಇದೆ. ಆದರೆ, ಮನುಷ್ಯ ಸ್ವಾರ್ಥಕ್ಕಾಗಿ ಮರಗಳ ಮಾರಣ ಹೋಮ ನಡೆಸುತ್ತಿದ್ದಾನೆ. ನದಿ ನೀರನ್ನು ಹಿಡಿದಿಡುವ ಮರಳನ್ನು ಲೂಟಿ ಮಾಡುತ್ತಿದ್ದಾನೆ. ಮನುಷ್ಯ ಈ ರೀತಿ ನೀರಿನ ಮೂಲಗಳ ಮೇಲೆ ದಾಳಿ ಮಾಡುತ್ತಾ ಹೋದರೆ, ಕುಡಿಯಲು ನೀರು ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮೇಯರ್ ಅನಿತಾ ಬಾಯಿ ಮಾಲತೇಶ್‌ರಾವ್ ಜಾಧವ್ , ಉಪ ಮೇಯರ್ ಮಂಜಮ್ಮ ಹನುಮಂತಪ್ಪ, ಪಾಲಿಕೆ ಸದಸ್ಯ ಎಂ. ಹಾಲೇಶ್ ಮಾತನಾಡಿದರು.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಮಿಟಿ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ ವಹಿಸಿದ್ದರು.
ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ, ಪಾಲಿಕೆ ಸದಸ್ಯೆ ಗೌರಮ್ಮ ಚಂದ್ರಪ್ಪ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಕುಮಾರ ಹನುಮಂತಪ್ಪ, ದುರ್ಗಾಂಭಿಕ ಧರ್ಮದರ್ಶಿ ಸಮಿತಿಯ ಗೌಡ್ರ ಚನ್ನಬಸಪ್ಪ, ಎನ್. ನೀಲಗಿರಿಯಪ್ಪ, ಬಿ.ಎಂ. ಈಶ್ವರ್, ಎಂ. ಹುಚ್ಚೆಂಗಪ್ಪ, ಎಸ್. ನಿಂಗಪ್ಪ, ಎಲ್.ಡಿ. ಗೋಣೆಪ್ಪ, ಎಸ್. ಮಲ್ಲಿಕಾರ್ಜುನ, ಪೂಜಾರ್ ಕೃಷ್ಣಪ್ಪ, ಬಿ.ಎಂ. ರಾಮಸ್ವಾಮಿ, ಎ.ಕೆ. ನಾಗಪ್ಪ, ಹನುಮಂತಪ್ಪ, ಲೋಹಿತಪ್ಪ, ಎಲ್.ಎಚ್. ಸಾಗರ್ ಮತ್ತಿತರರಿದ್ದರು.







