ಮಿತ್ತಬೈಲ್ ಉಸ್ತಾದ್, ಕಮ್ಮಾಡಿ ಹಾಜಿ ಅವರಿಗೆ ಸನ್ಮಾನ

ಪುತ್ತೂರು,ಎ.18: ಅರಿವು, ಉತ್ತಮವಾದ ಕುಟುಂಬ ಮತ್ತು ಸ್ವಭಾವ ವ್ಯಕ್ತಿಗಳ ಗೌರವಕ್ಕೆ ಕಾರಣವಾಗುತ್ತದೆ. ಇಂತಹ ಅರ್ಹತೆಯ ಆಧಾರದಲ್ಲಿ ಶೈಖುನಾ ಜಬ್ಬಾರ್ ಉಸ್ತಾದ್ ಮತ್ತು ಇಬ್ರಾಹಿಂ ಹಾಜಿ ಕಮ್ಮಾಡಿ ಸನ್ಮಾನದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಮೂಡಿಗೆರೆ ಸಂಯುಕ್ತ ಜಮಾಅತ್ ಖಾಝಿ ಎಂ.ಎ. ಖಾಸಿಂ ಮುಸ್ಲಿಯಾರ್ ಹೇಳಿದರು.
ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ವತಿಯಿಂದ ಮಂಗಳವಾರ ಸಂಪ್ಯದ ಕಮ್ಮಾಡಿ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾದಿ ಅವರ ಜೀವನ ಚರ್ಯೆ ಮತ್ತು ವಿನೀತ ಸ್ವಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಸ್ತ ಮುಶಾವರದ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿರುವ ಜಬ್ಬಾರ್ ಉಸ್ತಾದ್ ಹಾಗೂ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿರುವ ಕಮ್ಮಾಡಿ ಇಬ್ರಾಹೀಂ ಹಾಜಿ ಅವರು ಕರ್ನಾಟಕದಲ್ಲಿನ ಮುಸ್ಲಿಂ ಸಮುದಾಯಕ್ಕೆ ಕೀರ್ತಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ, ಜನಸಾಮಾನ್ಯರಿಗೆ ಹೆಚ್ಚಿನ ಸೇವೆ ಒದಗಿಸುವವರು ಅಲ್ಲಾಹನು ಹೆಚ್ಚು ಇಷ್ಟ ಪಡುವವರಾಗಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಸಂತೋಷ ನೀಡುವ ಗುಣ ಕಮ್ಮಾಡಿ ಹಾಜಿ ಅವರಲ್ಲಿದೆ. ಇದು ಅವರಿಗೆ ಅಲ್ಲಾಹು ನೀಡಿದ ಅನುಗ್ರಹವಾಗಿದೆ ಎಂದರು.
ತಾಲೂಕು ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಪುತ್ತೂರು ಮುದರ್ರಿಸ್ ಅಲ್‌ಹಾಜ್ ಅಹ್ಮದ್ ಪೂಕೋಯ ತಂಙಳ್ ಅವರು ದುವಾ ನೆರವೇರಿಸಿದರು.
ಈ ವೇಳೆ ಕಮ್ಮಾಡಿ ಇಬ್ರಾಹೀಂ ಹಾಜಿ, ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಬಿ.ಎ.ಶಕೂರ್ ಹಾಜಿ, ಕಾರ್ಯದರ್ಶಿ ಎಲ್.ಟಿ. ರಝಾಕ್ ಹಾಜಿ,ಹಾಜಿ ಎಸ್. ಇಬ್ರಾಹೀಂ ಕಮ್ಮಾಡಿ, ಎಸ್.ಬಿ. ಮುಹಮ್ಮದ್ ದಾರಿಮಿ, ಅಬ್ದುಲ್ ಹಮೀದ್ ದಾರಿಮಿ, ಸತ್ತಾರ್ ಸಖಾಫಿ, ಅಬ್ಬಾಸ್ ಮದನಿ, ಮಹಮ್ಮದ್ ದಾರಿಮಿ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ಹಾಗೂ ತಾಲೂಕಿನ ವಿವಿಧ ಮಸೀದಿಗಳ ಖತೀಬರು ಉಪಸ್ಥಿತರಿದ್ದರು.







