ಜಿ.ಕೃಷ್ಣಮೂರ್ತಿ ಜಾಮೀನು ಕೋರಿ ಅರ್ಜಿ ಸಲ್ಲಿಕೆ: ಎಸಿಬಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

ಬೆಂಗಳೂರು, ಎ.18: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆದಿರುವ ಆರೋಪದಲ್ಲಿ ಬಂಧನದಲ್ಲಿರುವ ಬಿಬಿಎಂಪಿ ಸದಸ್ಯ ಜಿ.ಕೃಷ್ಣಮೂರ್ತಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಎಸಿಬಿಗೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಜಿ.ಕೃಷ್ಣಮೂರ್ತಿ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಎಸಿಬಿಗೆ ನೋಟಿಸ್ ಜಾರಿಗೊಳಿಸಿ ಆದೇಶಿಸಿದೆ.
ಪ್ರಕರಣವೇನು: ರಾಜಾಜಿನಗರ ವಾರ್ಡ್‌ನಲ್ಲಿ ಅಭಿವೃದ್ಧಿಯ ಕಾಮಗಾರಿ ನಡೆಸಿದ್ದಕ್ಕೆ ಗುತ್ತಿಗೆದಾರ ಧನಂಜಯ ನಾಯ್ಡು ಅವರಿಗೆ 3 ಕೋಟಿ ರೂ. ಬಿಲ್ ಬಾಕಿ ಇತ್ತು. ಬಿಲ್ ಪಾವತಿಗೆ ಅನುಮೋದನೆ ಕೊಡಲು ಕೃಷ್ಣಮೂರ್ತಿ 23 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಲಂಚಕ್ಕೆ ಬೇಡಿಕೆ ಇಟ್ಟ ವಿಚಾರವನ್ನು ಧನಂಜಯ್ ಎಸಿಬಿಗೆ ತಿಳಿಸಿದ್ದರು. ಅದರಂತೆ ಎಸಿಬಿ ಎಸ್ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ 10 ಲಕ್ಷ ರೂ.ಲಂಚ ಸ್ವೀಕರಿಸುವಾಗ ಪಾಲಿಕೆ ಸದಸ್ಯ ಕೃಷ್ಣ ಮೂರ್ತಿ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ವಾರ್ಡ್ 99ರಲ್ಲಿ ನಡೆದಿದ್ದ ಕಾಮಗಾರಿಯ ಬಿಲ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ದಾಳಿ ವೇಳೆ 15 ಲಕ್ಷ ಹಣ ಪತ್ತೆಯಾಗಿದೆ. ಕೃಷ್ಣಮೂರ್ತಿ ಹಾಗೂ ಬಿಬಿಎಂಪಿ ಎಇ ಕೆ.ಎಂ. ಕೃಷ್ಣ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಧನಂಜಯ್ ಎಸಿಬಿಗೆ ದೂರು ನೀಡಿದ್ದರು. ಮೊದಲ ಕಂತಿನ ಹಣ ನೀಡುವಾಗ ಈ ಮೂವರು ಎಸಿಬಿ ಬಲೆಗೆ ಬಿದ್ದಿದ್ದರು.





