ಐಐಟಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಉಡುಪು ಸಂಹಿತೆ
ದೇಹಮುಚ್ಚುವ, ಸಭ್ಯ ಉಡುಪು ಧರಿಸಲು ಸುತ್ತೋಲೆ

ಹೊಸದಲ್ಲಿ, ಎ.18: ಇಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ವಿದ್ಯಾರ್ಥಿನಿಯರ ವಸತಿನಿಲಯವು ತನ್ನ ನಿವಾಸಿಗಳಿಗೆ, ಹಾಸ್ಟೆಲ್ ದಿನಾಚರಣೆ ಕಾರ್ಯಕ್ರಮಕ್ಕೆ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಹ ಸಭ್ಯವಾದ ಪಾಶ್ಚಾತ್ಯ ಅಥವಾ ಭಾರತೀಯ ಉಡುಪುಗಳನ್ನು ಮಾತ್ರವೇ ಧರಿಸಿ ಬರುವಂತೆ ಸೂಚನೆ ನೀಡಿದೆ. ಆದರೆ ಹಾಸ್ಟೆಲ್‌ನ ಈ ಆದೇಶವು ಮಹಿಳಾ ಹಕ್ಕುಗಳ ಉಲ್ಲಂಘೆಯೆಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿವೆ.
ಹಾಸ್ಟೆಲ್ ದಿನಾಚರಣೆಯಂದು, ವಸತಿನಿಲಯ ತಮಗೆ ಉಡುಪು ಸಂಹಿತೆ ವಿಧಿಸುವ ಸುತ್ತೋಲೆಯನ್ನು ಹೊರಡಿಸಿರುವುದನ್ನು ಹಾಸ್ಟೆಲ್‌ನ ಅನೇಕ ವಿದ್ಯಾರ್ಥಿನಿಯರು ವಿರೋಧಿಸಿದ್ದಾರೆ. ಈ ಹಿಂದಿನ ವರ್ಷಗಳಲ್ಲಿಯೂ ತಮಗೆ ಇದೇ ರೀತಿಯ ಸಂದೇಶಗಳನ್ನು ವೌಖಿಕವಾಗಿ ನೀಡಲಾಗಿತ್ತು. ನಿವಾಸಿಗಳು ಒಂದು ತಾಸಿನ ಅವಧಿಗೆ ಅತಿಥಿಗಳನ್ನು ತಮ್ಮ ಹಾಸ್ಟೆಲ್‌ನ ಆವರಣಕ್ಕೆ ಆಮಂತ್ರಿಸಬಹುದಾಗಿದೆ. ಈ ಕಾರ್ಯಕ್ರಮವು ಎಪ್ರಿಲ್ 20ರಂದು ನಡೆಯಲಿದೆ.ಈ ಸಲ ಮೊದಲ ಬಾರಿಗೆ ಲಿಖಿತ ರೂಪದಲ್ಲಿ ನೋಟಿಸ್ ನೀಡಲಾಗಿದೆಯೆಂದು ಕೆಲವು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ದಿಲ್ಲಿ ಐಐಟಿಯ ಹಿಮಾದ್ರಿ ಹಾಸ್ಟೆಲ್‌ನಲ್ಲಿ ಈ ನೋಟಿಸ್ ಹಾಕಲಾಗಿದ್ದು, ಅದಕ್ಕೆ ವಾರ್ಡನ್ ಸಹಿ ಹಾಕಿದ್ದಾರೆ.
ಹಾಸ್ಟೆಲ್, ವಿವಿ ಹಾಗೂ ಕಾಲೇಜ್‌ಗಳಲ್ಲಿರುವ ಮಹಿಳಾ ತಾರತಮ್ಯದ ನಿಯಮಗಳ ವಿರುದ್ಧ ಹೋರಾಡುವ ‘ಪಿಂಜರಾ ಥೋಡ್’ ಎನ್‌ಜಿಓ ಸಂಸ್ಥೆಗೆ ದೂರು ನೀಡಿದ್ದಾರೆ. ಮಹಿಳೆಯರು ಧರಿಸುವ ಉಡುಪಿನ ಬಗ್ಗೆ ಕಾವಲು ಕಾಯಲು ಯಾಕೆ ಇಷ್ಟೊಂದು ಕಾತರ ಹಾಗೂ ತಳಮಳವೆಂದು ಪಿಂಜಾರಾ ಥೋಡ್ ತನ್ನ ಫೇಸ್‌ಬುಕ್ ಪುಟದಲ್ಲಿ ತಿಳಿಸಿದೆ.
ದಿಲ್ಲಿಯಲ್ಲಿ ಕಾಲೇಜೊಂದು ತನ್ನ ವಿದ್ಯಾರ್ಥಿನಿಯರಿಗೆ ವಸ್ತ್ರ ಸಂಹಿತೆಯನ್ನು ಹೇರಲು ಪ್ರಯತ್ನಿಸಿರುವುದು ಇದು ಮೊದಲೇನೂ ಅಲ್ಲ. ಕಳೆದ ವರ್ಷ ದಿಲ್ಲಿ ವಿವಿಯ ಅಧೀನಕ್ಕೊಳಪಟ್ಟ ಹಿಂದೂ ಕಾಲೇಜ್, ತನ್ನ ಹಾಸ್ಟೆಲ್‌ನ ವಿದ್ಯಾರ್ಥಿನಿಯರಿಗೆ ಉಡುಪು ಸಂಹಿತೆಗೆ ಸಂಬಂಧಿಸಿದ ನಿಯಮಗಳನ್ನು ಜಾರಿಗೊಳಿಸಿತ್ತು.