ಭಟ್ಕಳ ತಾಲೂಕು ಆಸ್ಪತ್ರೆ ವೈದ್ಯರಿಗೆ ಡಿಎಚ್‌ಒ ತರಾಟೆ

ಭಟ್ಕಳ, ಎ.18: "ಹೆರಿಗೆ ಮಾಡಿಸಲು ಇಲ್ಲಿ ವೈದ್ಯರೇ ಇಲ್ಲ: ಇದು ಭಟ್ಕಳ ಸರಕಾರಿ ಆಸ್ಪತ್ರೆಯ ಕರ್ಮಕಾಂಡ" ಎಂಬ ಶೀರ್ಷಿಕೆಯಡಿ 'ವಾರ್ತಾಭಾರತಿ' ಸೇರಿದಂತೆ ವಿವಿಧ ಮಾಧ್ಯಮ ಗಳಲ್ಲಿ ಪ್ರಕಟಗೊಂಡ ವರದಿಗೆ ಕೂಡಲೇ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ ಕುಮಾರ್, ಸೋಮವಾರ ಭಟ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜುನಾಥ್ ಶೆಟ್ಟಿ ಸೇರಿದಂತೆ ಹಿರಿಯ, ಕಿರಿಯ ವೈದ್ಯರು, ದಾದಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಸರಿಯಾಗಿ ಕಾರ್ಯನಿರ್ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿ, ರಜೆಗೆ ಹೋಗಬೇಕಾದರೆ ಒಂದು ವಾರ ಮುಂಚೆ ಮೇಲಧಿಕಾರಿಗಳ ಅನುಮತಿ ಪಡೆಯಿರಿ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಆದೇಶ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿ ಕಾರಿಗಳ ಮುಂದೆ ಆಸ್ಪತ್ರೆಯಲ್ಲಿನ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಅಹವಾಲುಗಳನ್ನು ಮುಂದಿಟ್ಟರು. ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಸಾರ್ವಜನಿಕರ ಜೊತೆ ನರ್ಸ್‌ಗಳು ತೀರಾ ಅಮಾನವೀಯ ರೀತಿಯಲ್ಲಿ ವರ್ತಿಸುತ್ತಾರೆ. ಆಸ್ಪತ್ರೆಗೆ ಆಕಸ್ಮಿಕವಾಗಿ ರೋಗಿಗಳು ಬಂದರೆ ತಪಾಸಣೆ ಮಾಡಲು ಯಾವೊಬ್ಬ ವೈದ್ಯರು ಇರುವುದಿಲ್ಲ. ಆಸ್ಪತ್ರೆಯಲ್ಲಿ ವೈದ್ಯರಿಗೂ ಹಾಗೂ ನರ್ಸ್‌ಗಳ ಮಧ್ಯೆ ಸಂವಹನದ ಅಂತರ ತೀರಾ ಕಡಿಮೆ ಇದ್ದು, ಇದು ರೋಗಿಗಳ ಮೇಲೆ ಪರಿಣಾಮ ಬೀಳುತ್ತಿದೆ. ಈ ಬಗ್ಗೆ ನಿಮ್ಮ ಗಮನಕ್ಕೆ ತಂದರೆ ನೀವು ಸಹ ಯಾವುದೇ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳದೇ ಪೊಳ್ಳು ಭರವಸೆಯನ್ನು ನೀಡುತ್ತೀರಿ. ಈ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದಾಗಲೂ ಆಸ್ಪತ್ರೆಯ ಸಮಸ್ಯೆಯ ಬಗ್ಗೆ ಸವಿವರವಾಗಿ ತಿಳಿಸಿದಾಗಲು ಎಲ್ಲ್ಲ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವುದಾಗಿ ಹೇಳಿ ಹೋಗಿದ್ದೀರಿ. ಈಗಲೂ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸರಿಯಾದ ಕ್ರಮ ತೆಗೆದುಕೊಳ್ಳುವ ಬದಲು ಸಮಯಾವಕಾಶ ಕೇಳುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಸಮಸ್ಯೆ ಪರಿಹಾರವಾಗದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಎಚ್‌ಒ, ವೈದ್ಯರಿಲ್ಲ ಎಂಬ ಕಾರಣ ನೀಡಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡದೆ ಬೇರೆ ಆಸ್ಪತ್ರೆಗೆ ಹೋಗುವಂತೆ ಮಾಡಿರುವುದು ವೈದ್ಯರ ನಿರ್ಲಕ್ಷ್ಯ ಧೋರಣೆಯಾಗಿದೆ. ಮುಂದೇ ಹೀಗಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಸರಕಾರದ ನಿಯಮಾ ವಳಿಗಳಂತೆ ನಿರ್ಲಕ್ಷ್ಯ ತೋರಿದ ವೈದ್ಯರ ಮೇಲೆ ಕ್ರಮ ಜರಗಿಸಲಾಗುವುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳದ ಸರಕಾರಿ ಆಸ್ಪತ್ರೆಯ ಎಲ್ಲ ಹುದ್ದೆಗಳು ಭರ್ತಿಯಾಗಿವೆ. ಒಂದು ಹುದ್ದೆ ಮಾತ್ರ ಖಾಲಿ ಉಳಿದಿದ್ದು, ಅದನ್ನು ಭರ್ತಿ ಮಾಡಲು ಕ್ರಮ ಜರಗಿಸುತ್ತೇನೆ ಎಂದು ಹೇಳಿದರು.
ಆಸ್ಪತ್ರೆಗೆ ರಕ್ತ ತಪಾಸಣೆ ಮತ್ತಿತರ ವೈದ್ಯಕೀಯ ತಪಾಸಣೆೆಗೆಂದು ಬರುವ ಬಿಪಿಎಲ್ ಕಾರ್ಡ್ ಹೊಂದಿರುವ ಬಡಜನರಿಂದ ವೈದ್ಯರು ದುಡ್ಡು ಕೀಳುತ್ತಿದ್ದಾರೆ ಎಂಬ ವರದಿಗಾರರ ಪ್ರಶ್ನೆಗೆ ಮಾಧ್ಯಮದವರ ಮುಂದೇ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.







