ಎಐಎಡಿಎಂಕೆಯಲ್ಲಿ ಚಿನ್ನಮ್ಮ ದರ್ಬಾರ್ ಅಂತ್ಯ
ಪಕ್ಷದ ಶಾಸಕರ ಸಭೆಯಲ್ಲಿ ಶಶಿಕಲಾ , ಮನ್ನಾರ್‌ಗುಡಿ ಕುಟುಂಬವನ್ನು ಹೊರ ಹಾಕಲು ನಿರ್ಧಾರ

ಚೆನ್ನೈ, ಎ.18: ತಮಿಳುನಾಡಿನಲ್ಲಿ ನಡೆದಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಮತ್ತು ಅವರ ಮನ್ನಾರ್‌ಗುಡಿ ಕುಟುಂಬವನ್ನು ಎಐಎಡಿಎಂಕೆ ಪಕ್ಷದಿಂದ ಹೊರ ಹಾಕುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮುಖ್ಯ ಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಚೆನ್ನೈನಲ್ಲಿ ಇಂದು 3 ಗಂಟೆಗಳ ಕಾಲ ನಡೆದ ಎಐಎಡಿಎಂಕೆ ಶಾಸಕರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಕ್ಷವನ್ನು ಉಳಿಸುವ ಉದ್ದೇಕ್ಕಾಗಿ ಸಭೆಯಲ್ಲಿ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವ ಜಯಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ 122 ಮಂದಿ ಶಾಸಕರು ಭಾಗವಹಿಸಿದ್ದರು. ಪಳನಿಸ್ವಾಮಿ ಬಣದ ಈ ನಿರ್ಧಾರಕ್ಕೆ ಪಕ್ಷದ ಹಿರಿಯ ನಾಯಕರು, ಶಾಸಕರು, ಸಂಸದರು ಬೆಂಬಲ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಸೆಲ್ವಂ ಬಣಕ್ಕೆ ಜಯ: ಇದರೊಂದಿಗೆ ಮಾಜಿ ಮುಖ್ಯ ಮಂತ್ರಿ ಪನ್ನೀರ್ ಸೆಲ್ವಂ ಬಣಕ್ಕೆ ಜಯ ದೊರೆತಂತಾಗಿದ್ದು, ಉಭಯ ಬಣಗಳ ವಿಲೀನಕ್ಕೆ ವೇದಿಕೆ ಸಿದ್ಧವಾಗಿದೆ. ಸೆಲ್ವಂ ಅವರನ್ನು ವಿಲೀನದ ಬಗ್ಗೆ ಚರ್ಚಿಸಲು ಪಳನಿಸ್ವಾಮಿ ಬಣದ ನಾಯಕರು ಆಸಕ್ತಿ ವಹಿಸಿದ್ದಾರೆ.
ವಿ.ಕೆ.ಶಶಿಕಲಾ ಮತ್ತು ಕುಟುಂಬವನ್ನು ರಾಜಕೀಯದಿಂದ ದೂರವಿಡುವ ತನಕ ಎಐಎಡಿಎಂಕೆ(ಅಮ್ಮಾ) ಮತ್ತು ಎಐಎಡಿಎಂಕೆ (ಪುರುಚಿ ತಲೈವಿ ಅಮ್ಮಾ) ಬಣಗಳ ವಿಲೀನ ಮಾತುಕತೆ ಇಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಓ.ಪನ್ನೀರ್ ಸೆಲ್ವಂ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.