ಶ್ರೀಶಾಂತ್ ವಿರುದ್ಧ ನಿಷೇಧ ಹಿಂಪಡೆಯಲು ಬಿಸಿಸಿಐ ನಕಾರ

ಕೊಚ್ಚಿ, ಎ.18: ಭಾರತದ ಕಳಂಕಿತ ವೇಗದ ಬೌಲರ್ ಎಸ್.ಶ್ರೀಶಾಂತ್‌ಗೆ ಬಿಸಿಸಿಐ ಮತ್ತೆ ಶಾಕ್ ನೀಡಿದೆ. ಶ್ರೀಶಾಂತ್‌ಗೆ ವಿಧಿಸಿರುವ ಆಜೀವ ನಿಷೇಧ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
2015ರ ಜುಲೈ 25 ರಂದು ದಿಲ್ಲಿ ನ್ಯಾಯಾಲಯವು ತನ್ನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಮುಕ್ತಗೊಳಿಸಿದ್ದರೂ ಬಿಸಿಸಿಐ ತನಗೆ ವಿಧಿಸಿರುವ ಆಜೀವ ನಿಷೇಧವನ್ನು ಮುಂದುವರಿಸಿದ್ದನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ದಿಲ್ಲಿ ಪೊಲೀಸರು ನೀಡಿರುವ ಮಾಹಿತಿಯನ್ನು ಆಧರಿಸಿ ಬಿಸಿಸಿಐ ಒಂದು ತೀರ್ಮಾನಕ್ಕೆ ಬಂದಿದೆ. ನ್ಯಾಯಾಲಯ ನನ್ನ ವಿರುದ್ಧ ಎಲ್ಲ ಪ್ರಕರಣವನ್ನು ಕೈಬಿಟ್ಟಿದ್ದು, ದೋಷಮುಕ್ತಗೊಳಿಸಿದೆ ಎಂದು ಶ್ರೀಶಾಂತ್ ಅರ್ಜಿಯಲ್ಲಿ ಪ್ರಸ್ತಾವಿಸಿದ್ದರು.
ಶ್ರೀಶಾಂತ್ ಅರ್ಜಿಗೆ ಆಕ್ಷೇಪವ್ಯಕ್ತಪಡಿಸಿ ಅಫಿಡಾವಿತ್ ಸಲ್ಲಿಸಿದ ಬಿಸಿಸಿಐ,‘‘2013ರ ಸೆಪ್ಟಂಬರ್‌ನಲ್ಲಿ ಬಿಸಿಸಿಐ ಉಪಾಧ್ಯಕ್ಷ ಹಾಗೂ ಕೇರಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಟಿ.ಸಿ.ಮ್ಯಾಥ್ಯೂ ಹಾಗೂ ಕೆಸಿಎ ಕಾರ್ಯದರ್ಶಿ ಟಿ.ಎನ್. ಅನಂತನಾರಾಯಣ್ ಅವರನ್ನೊಳಗೊಂಡ ಬಿಸಿಸಿಐ ಶಿಸ್ತು ಸಮಿತಿ ಆಜೀವ ನಿಷೇಧ ಹೇರಿತ್ತು. ಅರ್ಜಿದಾರರನ್ನು ಸೆಶನ್ಸ್ ಕೋರ್ಟ್ ಕ್ರಿಮಿನಲ್ ಪ್ರಕರಣವೊಂದರಲ್ಲ್ಲಿ ದೋಷಮುಕ್ತಗೊಳಿಸಿರುವ ತೀರ್ಪು ನಮ್ಮ ನಿಷೇಧ ನಿರ್ಧಾರದ ಮೇಲೆ ಪರಿಣಾಮಬೀರುವುದಿಲ್ಲ. ಅವರ ವಿರುದ್ಧ ಶಿಸ್ತುಸಮಿತಿ ವಿಧಿಸಿರುವ ನಿಷೇಧ ಮುಂದುವರಿಯಲಿದೆ. ಅವರಿಗೆ ಸ್ಕಾಟ್ಲೆಂಡ್ ಲೀಗ್‌ನಲ್ಲಿ ಭಾಗವಹಿಸಲು ನಿರಾಕ್ಷೇಪಣಾ ಪತ್ರವನ್ನು ನೀಡುವುದಿಲ್ಲ. ಹಳೆಯ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಹೊಸ ಶಿಸ್ತು ಸಮಿತಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ’’ ಎಂದು ಹೇಳಿದೆ.
ದಿಲ್ಲಿ ನ್ಯಾಯಾಲಯದಿಂದ ದೋಷಮುಕ್ತಗೊಂಡಿದ್ದ ಶ್ರೀಶಾಂತ್ ಈವರ್ಷದ ಮಾರ್ಚ್‌ನಲ್ಲಿ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐ ತನ್ನ ವಿರುದ್ಧ ವಿಧಿಸಿರುವ ನಿಷೇಧವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿ 2013ರಲ್ಲಿ ದಿಲ್ಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು.







