ಕಳ್ಳತನ ಆರೋಪಿಯ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

ದಾವಣಗೆರೆ, ಎ.18: ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಹಗಲು ಹೊತ್ತಿನಲ್ಲಿಯೇ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಹರಪನಹಳ್ಳಿ ಪೊಲೀಸರು, ಬಂಧಿತನಿಂದ 2.59 ಲಕ್ಷ ರೂ. ವೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಎಸ್. ಗುಳೇದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ಬಿ. ಶಿವಕುಮಾರ್ ಅಲಿಯಾಸ್ ಗಿರೀಶ್ ಎಂಬಾತನೇ ಬಂಧಿತ ಆರೋಪಿ. ಅನೇಕ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಐದಕ್ಕೂ ಹೆಚ್ಚು ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾದ ಈತ ಮತ್ತೆ ಕಳವು ಮಾಡುತ್ತಿದ್ದ. ಎ.6ರಂದು ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಲಿಂಗರಾಜ್ ಅವರ ಮನೆಯಲ್ಲಿ ಮಧ್ಯಾಹ್ನದ ವೇಳೆ 65.6 ಗ್ರಾಂ ಬಂಗಾರದ ಆಭರಣ, 210 ಗ್ರಾಂ ಬೆಳ್ಳಿಯ ಆಭರಣ ಮತ್ತು 45 ಸಾವಿರ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದ.
ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಹಳೆ ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದು ಆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಶಿವಕುಮಾರ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹಲವಾಗಲು ಮತ್ತು ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಟನಹಳ್ಳಿಯಲ್ಲೂ ಮನೆಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದರು.
ಆರೋಪಿಯ ಬಂಧನ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.







