ಧೋನಿಗೆ ಶೇನ್ ವಾರ್ನ್ ಬೆಂಬಲ

ಹೊಸದಿಲ್ಲಿ, ಎ.18: ಪ್ರಸ್ತುತ ಐಪಿಎಲ್‌ನಲ್ಲಿ ಕಳಪೆ ಫಾರ್ಮ್‌ನಿಂದ ಎಲ್ಲೆಡೆ ಟೀಕೆಗೆ ಗುರಿಯಾಗಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಆಸ್ಟ್ರೇಲಿಯದ ಲೆಗ್ ಸ್ಪಿನ್ ದಂತಕತೆ ಶೇನ್ ವಾರ್ನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
‘‘ಭಾರತದ ಮಾಜಿ ನಾಯಕ ಧೋನಿಗೆ ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾದ ಅಗತ್ಯವಿಲ್ಲ. ಅವರೋರ್ವ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ದರ್ಜೆಯ ಅಪೂರ್ವ ಆಟಗಾರ. ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ’’ ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.
ಧೋನಿ 10ನೆ ಆವೃತ್ತಿಯ ಐಪಿಎಲ್‌ನಲ್ಲಿ 15ರ ಸರಾಸರಿಯಲ್ಲಿ 87.14ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಐದು ಪಂದ್ಯಗಳಲ್ಲಿ ಕೇವಲ ಎರಡು ಸಿಕ್ಸರ್ ಸಿಡಿಸಲಷ್ಟೇ ಶಕ್ತರಾಗಿದ್ದಾರೆ.
ಈಗಲೂ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ನಂ.1 ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಮಿಂಚುತ್ತಿರುವ ಧೋನಿ ಕಳೆದ ಕೆಲವು ಸಮಯದಿಂದ ಅನಿಶ್ಚಿತ ಫಾರ್ಮ್‌ನಲ್ಲಿದ್ದಾರೆ. ಈ ಮೂಲಕ ಅವರ ಮ್ಯಾಚ್ ವಿನ್ನಿಂಗ್ ಸಾಮರ್ಥ್ಯದ ಬಗ್ಗೆಯೇ ಚರ್ಚೆ ಆರಂಭವಾಗಿದೆ. ಐಪಿಎಲ್-10ರಲ್ಲಿ ಧೋನಿಯ ವಿಕೆಟ್‌ಕೀಪಿಂಗ್ ಅತ್ಯುತ್ತಮವಾಗಿದೆ.
ಆದರೆ, ಐಪಿಎಲ್‌ನಲ್ಲಿ ರನ್ ಬರ ಎದುರಿಸುತ್ತಿರುವ ಧೋನಿ ಕಳೆದ ಕೆಲವು ವಾರಗಳಿಂದ ಚರ್ಚೆಯ ವಿಷಯವಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಕೇವಲ ಒಂದು ಅರ್ಧಶತಕ ಬಾರಿಸಿರುವ ಧೋನಿ ಉತ್ತಮ ಟ್ವೆಂಟಿ-20 ಆಟಗಾರನಲ್ಲ ಎಂದು ಮಾಜಿ ನಾಯಕ ಸೌರವ್ ಗಂಗುಲಿ ಅಭಿಪ್ರಾಯಪಟ್ಟಿದ್ದರು.







