"ನನ್ನ ಕನಸು" ಮಕ್ಕಳ ಶಿಬಿರ ಉದ್ಘಾಟನೆ

ಮಣಿಪಾಲ, ಎ.18: ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಇಂದಿನ ಯುಗದಲ್ಲಿ ವಲಸೆ ಕಾರ್ಮಿಕರ ಮಕ್ಕಳು ತಮ್ಮ ಬಾಲ್ಯದ ಎಲ್ಲ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಮಣಿಪಾಲ ಎಂಐಟಿ ಹಾಗೂ ಮಣಿಪಾಲ ಲಯನ್ಸ್ ಮತ್ತು ಲಯನೆಸ್ಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಅವಕಾಶ ವಂಚಿತ ಮಕ್ಕಳಿಗಾಗಿ 10 ದಿನಗಳ ಕಾಲ ಹಮ್ಮಿಕೊಳ್ಳಲಾದ "ನನ್ನ ಕನಸು" ಬೇಸಿಗೆ ಶಿಬಿರವನ್ನು ಮಂಗಳವಾರ ಮಣಿಪಾಲ ಎಂಐಟಿ ಲೈಬ್ರರಿ ಹಾಲ್ ಸಭಾಂಗಣ ದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಟ್ಟಡ ಕಾಮಗಾರಿ, ವಾಣಿಜ್ಯ ಸಂಕೀರ್ಣಗಳಲ್ಲಿ ವಲಸೆ ಕಾರ್ಮಿಕರ ಪರಿಶ್ರಮವಿದ್ದು, ಇದರಿಂದ ನಮ್ಮ ಜಿಲ್ಲೆ ಸಾಕಷ್ಟು ಪ್ರಗತಿಯತ್ತ ಸಾಗುತ್ತಿದೆ. ಆದರೆ ಇದಕ್ಕೆ ಶ್ರಮ ವಹಿಸುವ ವಲಸೆ ಕಾರ್ಮಿಕರ ಮಕ್ಕಳಿಗೆ ಮಾತ್ರ ಯಾವುದೇ ಮನರಂಜನೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಈ ಶಿಬಿರವು ಇಂತಹ ಮಕ್ಕಳಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ. ಪೈ, ಡಾ.ಅರುಣ್ ಶಾನುಬಾಗ್, ಲಯನ್ಸ್ ಜಿಲ್ಲಾ ಗವರ್ನರ್ ದಿವಾಕರ್ ಶೆಟ್ಟಿ, ಡಾ.ಅನುಪ್ ಉಪಸ್ಥಿತರಿದ್ದರು.
ಲಯನ್ಸ್ ಅಧ್ಯಕ್ಷೆ ಸರಿತಾ ಸಂತೋಷ್ ಸ್ವಾಗತಿಸಿದರು. ರೀತು ಚಾಬ್ರಿಯಾ ವಂದಿಸಿದರು. ಡಾ.ರೇಷ್ಮಾ ಆರ್.ಪೈ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸರಳಬೆಟ್ಟು, ಸಗ್ರಿ ಸಹಿತ ವಿವಿಧ ಶಾಲೆಗಳ 78 ವಲಸೆ ಕಾರ್ಮಿಕರ ಮಕ್ಕಳು ಭಾಗವಹಿಸಿದ್ದು, ಇವರಿಗೆ ಒಳಾಂಗಣ ಆಟಗಳು, ಯೋಗ, ಸಂಗೀತ, ನೃತ್ಯ, ಚಿತ್ರಕಲೆ, ರಂಗಭೂಮಿ ಕಾರ್ಯಾಗಾರ, ಸಿನೆಮಾ ವೀಕ್ಷಣೆ, ಕರುಕುಶಲ ವಸ್ತುಗಳ ತಯಾರಿಕೆ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ.







