ಕೃಷಿಕರು ಔಷಧೀಯ ಸಸ್ಯಗಳನ್ನು ಬೆಳೆಸಲಿ: ಡಾ.ಚಂದ್ರಶೇಖರ್

ಉಡುಪಿ, ಎ.18: ಭಾರತದಲ್ಲಿರುವಷ್ಟು ಪ್ರಮಾಣದಲ್ಲಿ ಸಸ್ಯ ಸಂಪತ್ತು ಈ ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಇಲ್ಲ. ಭಾರತದಲ್ಲಿ ಈಗಾಗಲೇ ಸುಮಾರು 700 ಪ್ರಬೇಧದ ಔಷಧೀಯ ಸಸ್ಯಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 500ಕ್ಕೂ ಅಧಿಕ ಪ್ರಬೇಧದ ಸಸ್ಯಗಳು ಉಡುಪಿ ಜಿಲ್ಲೆಯಲ್ಲಿ ಕಾಣಸಿಗುತ್ತವೆ ಎಂದು ಆಯುರ್ವೇದಿಕ್ ವೈದ್ಯ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಮಂಗಳವಾರ ಉಡುಪಿ ರೆಸಿಡೆನ್ಸಿ ಹೊಟೇಲ್‌ನ ಸಭಾಂಗಣದಲ್ಲಿ ಆಯೋಜಿಸಲಾದ ಔಷಧೀಯ ಸಸ್ಯಗಳ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಾರುಕಟ್ಟೆಯಲ್ಲಿ ಇಂದು ಔಷಧೀಯ ಸಸ್ಯಗಳಿಗೆ ಸಾಕಷ್ಟು ಬೇಡಿಕೆ ಇದೆ. ನಮ್ಮ ಜಿಲ್ಲೆಯಲ್ಲಿ ಅವುಗಳನ್ನು ಬೆಳೆಸುವವರು ಇಲ್ಲದೆ ಪೂರೈಕೆ ತೀರಾ ಕಡಿಮೆ ಆಗಿದೆ. ಆದುದರಿಂದ ಕೃಷಿಕರು ತಮ್ಮ ಕೃಷಿ ಜೊತೆ ಉಪಬೆಳೆಯಾಗಿ ಔಷಧಿ ಸಸ್ಯಗಳನ್ನು ಬೆಳೆಸಲು ಮುಂದಾಗಬೇಕು. ಈ ಸಸ್ಯಗಳಿಗೆ ನಿರ್ವಹಣೆ, ಖರ್ಚು, ರೋಗದ ಸಮಸ್ಯೆ ಇರುವುದಿಲ್ಲ ಎಂದು ಅವರು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಔಷಧಿ ಸಸ್ಯಗಳ ಕೊರತೆ ಇರುವುದರಿಂದ ಬಹುತೇಕ ಆಯುರ್ವೇದಿಕ್ ಫಾರ್ಮಸ್ಸಿಯವರು ಕೇರಳದಿಂದ ಈ ಸಸ್ಯಗಳನ್ನು ದುಬಾರಿ ವೆಚ್ಚ ನೀಡಿ ತರುತ್ತಿದ್ದಾರೆ. ಪಶ್ಛಿಮ ಘಟ್ಟದ ತಪ್ಪಲಿನಲ್ಲಿರುವ ನಮಗೆ ಇವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ದುರಂತ. ಈ ಸಸ್ಯಗಳನ್ನು ಬೆಳೆಸಲು ಮಂಡಳಿಗಳಿಂದ ಅನುದಾನ ಕೂಡ ದೊರೆಯುತ್ತದೆ ಎಂದರು.
ಔಷಧಿ ಸಸ್ಯಗಳನ್ನು ಕೇವಲ ಪುಸ್ತಕಗಳಲ್ಲಿ ಓದುವುದರಿಂದ ಗುರುತಿಸುವುದು ಕಷ್ಟ. ಅದಕ್ಕೆ ನಾವು ಆ ಕ್ಷೇತ್ರಕ್ಕೆ ಇಳಿದು ಪ್ರಾಕ್ಟಿಕಲ್ ಆಗಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಔಷಧೀಯ ಸಸ್ಯಗಳನ್ನು ಬೆಳೆಸಿ ಲಾಭ ಗಳಿಸುವುದರ ಜೊತೆಗೆ ನಮ್ಮ ಪರಂಪರೆಯನ್ನು ಕೂಡ ಉಳಿಸಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಕೃಷ್ಣ ಬಂಟಕಲ್ ವಹಿಸಿದ್ದರು. ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.







