ಕುಡಿಯುವ ನೀರಿನ ಸಮಸ್ಯೆಯಾದರೆ ಸಿಇಒಗಳು ಹೊಣೆ: ಮುಖ್ಯಮಂತ್ರಿ

ಬೆಂಗಳೂರು, ಎ.18: ರಾಜ್ಯದ ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಅದಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒಗಳು ಹಾಗೂ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
2016-17ರಲ್ಲಿ ಕುಡಿಯುವ ನೀರಿಗಾಗಿ ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ 843.73 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಈ ಪೈಕಿ ಶೇ.90ರಷ್ಟು ಹಣ ಖರ್ಚಾಗಿದೆ. ರಾಜ್ಯದ 1575 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ಯಾವುದೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಅದಕ್ಕೆ ಸಿಇಒಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು. ಕುಡಿಯುವ ನೀರು ಪೂರೈಕೆ ಮಾಡಲು ಹಣದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳ ಬಳಿ 270 ಕೋಟಿ ರೂ.ಗಳು ಲಭ್ಯವಿದೆ. ಸಿಇಒಗಳಿಗೆ 90 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯುವಂತೆ ಸೂಚಿಸಲಾಗಿದ್ದು, ರೈತರಿಂದ 607 ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ. 20 ವಾರಗಳಿಗೆ ಆಗುವಷ್ಟು ಮೇವು ರಾಜ್ಯದಲ್ಲಿದೆ. 384 ಮೇವು ಬ್ಯಾಂಕುಗಳನ್ನು ಮಾಡಿದ್ದು, 84 ಕಡೆ ಗೋಶಾಲೆಗಳನ್ನು ತೆರೆಯಲಾಗಿದೆ. 7 ಲಕ್ಷ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ಕೆರೆ ಸಂಜೀವಿನಿ-2ರಡಿ ತೆಗೆದುಕೊಂಡಿರುವ ಎಲ್ಲ ಕೆರೆಗಳ ಕಾಮಗಾರಿಗಳನ್ನು ಪ್ರಸಕ್ತ ಸಾಲಿನ ಮೇ ಮತ್ತು ಜೂನ್‌ರೊಳಗೆ ಪೂರ್ಣಗೊಳಿಸುವಂತೆ ಹಾಗೂ ಅನುಮೋದಿತ ಮೊತ್ತದಲ್ಲಿ ಬಿಡುಗಡೆಗೆ ಬಾಕಿ ಇರುವ 40 ಕೋಟಿ ರೂ.ಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೂಡಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
2017-18ನೆ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಕೆರೆ ಸಂಜೀವಿನಿ ಯೋಜನೆಯಡಿ 25 ಕೋಟಿ ರೂ.ಗಳಿಗೆ ಸೀಮಿತಗೊಂಡು ಹಾಗೂ ಮೇ ಮತ್ತು ಜೂನ್‌ರೊಳಗೆ ಪೂರ್ಣಗೊಳಿಸಬಹುದಾದ ಕೆರೆ ಕಾಮಗಾರಿಗಳನ್ನು ಮಾತ್ರ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲು ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕು. ಉಳಿದಂತೆ ಈ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆಯಿಂದಲೇ ಅನುಷ್ಠಾನಗೊಳಿಸಲಿದ್ದು, ಅದರಂತೆ ಕ್ರಿಯಾ ಯೋಜನೆ ರೂಪಿಸಲು ಸಣ್ಣ ನೀರಾವರಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಗುಂಡ್ಲುಪೇಟೆಯ 133 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಪ್ರಸಕ್ತ ಸಾಲಿನ ಮೇ ಅಂತ್ಯಕ್ಕೆ ಹಾಗೂ ಚಾಮರಾಜನಗರ ಯೋಜನೆಯನ್ನು ಜೂನ್ ಅಂತ್ಯಕ್ಕೆ ಪೂರ್ಣಗೊಳಿಸಿ ಚಾಲನೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.







