ಲೋಕಾಯುಕ್ತ ಹಗರಣ: ಮದೀನಾಕ್ಕೆ ತೆರಳಲು ಕೋರಿ ಸೈಯದ್ ರಿಯಾಝ್ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು, ಎ.18: ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಸೈಯದ್ ರಿಯಾಝ್ ಮದೀನಾಕ್ಕೆ ತೆರಳಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಸೈಯದ್ ರಿಯಾಝ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಲೋಕಾಯುಕ್ತ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅಮಾನತ್ತಿನಲ್ಲಿರುವ ಸೈಯದ್ ರಿಯಾಝ್ ಗೆ ಮೇ 8 ರಿಂದ ಜೂನ್ ಅಂತ್ಯದವರೆಗೆ ಮದೀನಾಕ್ಕೆ ತೆರಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಸೈಯದ್ ರಿಯಾಝ್ ಮದೀನಾಕ್ಕೆ ತೆರಳಲು ಷರತ್ತು ಸಡಿಲಿಸಿ ಜಾಮೀನು ನೀಡಬೇಕು. ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರಿಗೆ ಯಾವುದೇ ಕಾರಣಕ್ಕೂ ಮದೀನಾಕ್ಕೆ ತೆರಳಲು ಅವಕಾಶ ನೀಡುವುದಿಲ್ಲ. ಹಾಗೂ ಅರ್ಜಿದಾರರು ಬೇಕಾದರೆ ಮತ್ತೊಂದು ಪೀಠದ ಮುಂದೆ ಅರ್ಜಿ ಸಲ್ಲಿಸಬಹುದೆಂದು ನಿರ್ದೇಶಿಸಿ ಅರ್ಜಿಯನ್ನು ವಜಾಗೊಳಿಸಿತು.
ಪ್ರಕರಣವೇನು: ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆಸುವುದಾಗಿ ಸರಕಾರಿ ಅಧಿಕಾರಿಗಳನ್ನು ಬೆದರಿಸಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದ ಎನ್ನುವುದರಲ್ಲಿ ರಿಯಾಝ್ ಪಾಲಿದೆ ಎಂಬ ಆರೋಪವಿದೆ.
ಎಸ್‌ಐಟಿ ವಶದಲ್ಲಿರುವ, ಭ್ರಷ್ಟಾಚಾರ ಪ್ರಕರಣದ ಎರಡನೆ ಆರೋಪಿ ಅಶೋಕ್‌ಕುಮಾರ್ ಅವರು ರಿಯಾಝ್ ಜೊತೆ ನೇರ ಸಂಪರ್ಕದಲ್ಲಿದ್ದರು. ರಿಯಾಝ್ ಮತ್ತು ಅಶ್ವಿನ್ ನಡುವೆ ನೇರ ಮಾತುಕತೆ ನಡೆಯುತ್ತಿತ್ತು. ಎಂಬ ಆರೋಪ ಕೂಡ ಇವರ ಮೇಲಿದೆ.







