ಜಾಧವ್ ಬಿಡುಗಡೆಗಾಗಿ ಭಾರತದಿಂದ ಪಾಕ್ ನಿವೃತ್ತ ಸೇನಾಧಿಕಾರಿ ಅಪಹರಣ: ಅಧಿಕಾರಿಗಳು

ಇಸ್ಲಾಮಾಬಾದ್, ಎ.18: ಪಾಕಿಸ್ತಾನದ ನಿವೃತ್ತ ಸೇನಾಧಿಕಾರಿಯನ್ನು ಭಾರತೀಯ ಗುಪ್ತಚರ ಸಂಸ್ಥೆಯು ವಶಕ್ಕೆ ತೆಗೆದುಕೊಳ್ಳುವ ಮುನ್ನ ಅವರಿಗೆ ಉದ್ಯೋಗದ ಆಮಿಷವೊಡ್ಡಿ ನೇಪಾಳಕ್ಕೆ ಕರೆತರಲಾಗಿತ್ತು ಮತ್ತು ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್‌ರನ್ನು ಬಿಡುಗಡೆಗೊಳಿಸಲು ಈ ವ್ಯಕ್ತಿಯನ್ನು ಬಳಸಿಕೊಳ್ಳುವುದು ಗುಪ್ತಚರ ಸಂಸ್ಥೆಯ ಆಶಯವಾಗಿದೆ ಎಂದು ಪಾಕಿಸ್ತಾನದ ಇಬ್ಬರು ಹಿರಿಯ ಭದ್ರತಾ ಅಧಿಕಾರಿಗಳು ಮಂಗಳವಾರ ತಿಳಿಸಿದರು.
ಎ.6ರಂದು ನೇಪಾಳವನ್ನು ತಲುಪಿದ ಬಳಿಕ ನಾಪತ್ತೆಯಾಗಿದ್ದ ಲೆಕ ಮುಹಮ್ಮದ್ ಹಬೀಬ್ ಅವರನ್ನು ಭಾರತೀಯ ಏಜಂಟ್‌ಗಳಿಬ್ಬರು ಅಪಹರಿಸಿದ್ದರು ಎಂದು ಅಧಿಕಾರಿಗಳು ಹೇಳಿರು. ಜಾಧವ್ ಬಿಡುಗಡೆಗೆ ಪಾಕಿಸ್ತಾನದ ಮೇಲೆ ಒತ್ತಡ ಹೇರುವುದು ಹಬೀಬ್ ಅಪಹರಣದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಹಬೀಬ್ ಎ.6ರಂದು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಳಿದಿರುವುದು ದಾಖಲೆಗಳಲ್ಲಿದೆ. ಓರ್ವ ಭಾರತೀಯ ಪ್ರಜೆ ಅವರನ್ನು ಬರಮಾಡಿಕೊಂಡು ಹೋಟೆಲ್‌ಗೆ ಕರೆದೊಯ್ದಿದ್ದ ಎಂದು ಓರ್ವ ಅಧಿಕಾರಿ ತಿಳಿಸಿದರೆ, ಇದನ್ನು ದೃಢಪಡಿಸಿದ ಇನ್ನೋರ್ವ ಅಧಿಕಾರಿ ಭಾರತದ ಗುಪ್ತಚರ ಸಂಸ್ಥೆ ‘ರಾ’ ಹಬೀಬ್‌ರ ಅಪಹರಣವನ್ನು ಯೋಜಿಸಿತ್ತು ಎಂದು ಹೇಳಿದರು.
ಪಾಕಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಸಂಭವಿಸಿದ 1,345 ಸಾವುಗಳಿಗೆ ಜಾಧವ್ ಸಂಬಂಧವನ್ನು ಕಲ್ಪಿಸಲಾಗಿದೆ. 2001ರಲ್ಲಿ ಭಾರತೀಯ ನೌಕಾಪಡೆಯ ಬೇಹುಗಾರಿಕೆ ವಿಭಾಗವನ್ನು ಸೇರಿದ್ದ ಜಾಧವ್ ಬಳಿಕ ಇರಾನ್‌ನಲ್ಲಿ ನಿಯೋಜಿಸಲ್ಪಟ್ಟಿದ್ದರು ಮತ್ತು 2016ರಲ್ಲಿ ಬಂಧನಕ್ಕೆ ಮುನ್ನ ನಕಲಿ ಗುರುತುಪತ್ರಗಳ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಹಲವಾರು ಬಾರಿ ರಹಸ್ಯ ಭೇಟಿಗಳನ್ನು ನೀಡಿದ್ದರು ಎಂದು ಈ ಅಧಿಕಾರಿಗಳು ತಿಳಿಸಿದರು. ಜಾಧವ್ ವಿಚಾಣೆ ಸಂದರ್ಭ ತನ್ನ ವಿರುದ್ಧದ ಬೇಹುಗಾರಿಕೆ ಆರೋಪ ಮತ್ತು ಭಯೋತ್ಪಾದನೆ ಸಂಬಂಧಿತ ಕೃತ್ಯಗಳ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಅವರು ಮಿಲಿಟರಿ ಮೇಲ್ಮನವಿ ನ್ಯಾಯಾಲಯದಲ್ಲಿ ಅಥವಾ ಸೇನಾ ಮುಖ್ಯಸ್ಥರಿಗೆ ದಯಾಭಿಕ್ಷೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಂವಿಧಾನದಂತೆ ಪಾಕ್ ಅಧ್ಯಕ್ಷರೂ ಅವರನ್ನು ಕ್ಷಮಿಸಬಹುದಾಗಿದೆ ಎಂದು ಅನಾಮಧೇಯರಾಗಿ ಉಳಿಯಲು ಬಯಸಿರುವ ಈ ಅಧಿಕಾರಿಗಳು ಹೇಳಿದರು.







